ಕೃಷಿಕರಿಗೆ ಮುಂಗಾರು ನವೋಲ್ಲಾಸ
ಕ.ಪ್ರ. ವಾರ್ತೆ, ರಾಯಚೂರು, ಜೂ.24
ಮುಂಗಾರು ಹಬ್ಬವು ರೈತಾಪಿ ವರ್ಗದಲ್ಲಿ ನವೋಲ್ಲಾಸ ತುಂಬುವ ಮೂಲಕ ಕೃಷಿ ಚಟುವಟಿಕೆಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ಆಂಧ್ರದ ವಾರ್ತಾ ಸಚಿವೆ ಡಿ.ಕೆ. ಅರುಣಾ ಭರತಸಿಂಹರೆಡ್ಡಿ ಹೇಳಿದರು.
ಅವರು ನಗರದಲ್ಲಿ ಸೋಮವಾರ ರಾಜೇಂದ್ರ ಗಂಜ್‌ನಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಕಡೆಯ ದಿನದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತ ನಾಡಿದರು.
ಆಧುನಿಕ ಜಗತ್ತಿನಲ್ಲಿರುವ ನಾವುಗಳು ಕೃಷಿಯತ್ತ ಆಸಕ್ತಿ ಕಳೆದುಕೊಳ್ಳುತ್ತಿದ್ದೇವೆ. ಕೃಷಿಯಲ್ಲಿ ನಷ್ಟದ ಪ್ರಮಾಣ ಹೆಚ್ಚಾಗುತ್ತಿರುವುದು ಕೃಷಿಯಿಂದ ವಿಮುಖರಾಗಲು ಕಾರಣವಾಗುತ್ತಿದೆ. ಗ್ರಾಮೀಣ ಭಾಗದವರು ಮಹಾನಗರಗಳಿಗೆ ಗುಳೆ ಹೋಗುವಂಥ ಸ್ಥಿತಿಯಿದ್ದು, ಮುಂಗಾರು ಹಬ್ಬದಂಥ ಕಾರ್ಯಕ್ರಮಗಳು ರೈತರಲ್ಲಿ ನವೋಲ್ಲಾಸ ತುಂಬುವ ಮೂಲಕ ಪುನಾ ಅವರನ್ನು ಕೃಷಿ ಕಾರ್ಯಗಳತ್ತ ಸೆಳೆಯುವಲ್ಲಿ ಸಂದೇಹವಿಲ್ಲ ಎಂದರು.
ಎಲ್ಲೆಡೆಯ ರೈತರು: ಆಂಧ್ರದ ಗದ್ವಾಲ್ ಮತ್ತು ರಾಯಚೂರು ನಗರಕ್ಕೆ ಅವಿನಾಭಾವ ಸಂಬಂಧವಿದೆ. ಗದ್ವಾಲ್ ಭಾಗದ ರೈತರು ನಗರದ ಎಪಿಎಂಸಿ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಆಗಮಿಸುತ್ತಾರೆಂದ ಅವರು, ರೈತಾಪಿ ವರ್ಗಕ್ಕೆ ಯಾವುದೇ ರಾಜ್ಯ, ಜಿಲ್ಲೆಯೆಂಬ ಬೇಧಭಾವವಿಲ್ಲ. ಎಲ್ಲ ರೈತರೂ ಒಂದೇ ಎಂಬ ಮನೋಭಾವ ಎಲ್ಲೆಡೆಯಿರುವುದನ್ನು ಕಾಣಬಹುದು ಎಂದು ಹೇಳಿದರು.
ಮುನ್ನೂರು ಕಾಪು ಸಮಾಜವು ಕಳೆದ ಅನೇಕ ವರ್ಷಗಳಿಂದ ನಗರದಲ್ಲಿ ಮುಂಗಾರು ಹಬ್ಬವನ್ನು ಆಚರಿಸುವ ಮೂಲಕ ಕೃಷಿಕರಿಗೆ ಸ್ಪೂರ್ತಿ ತುಂಬುವ ಕಾರ್ಯ ಮಾಡುತ್ತಿದೆ. ಗ್ರಾಮೀಣ ಭಾಗದಿಂದ ಮರೆಯಾಗುತ್ತಿರುವ ಸಂಪ್ರದಾಯವನ್ನು ಪುನಾ ನೆನಪಿಸಿಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅವಿನಾಭಾವ ಸಂಬಂಧ: ಮಾಜಿ ಶಾಸಕ ಹಾಗೂ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ರೂವಾರಿ ಪಾಪಾರೆಡ್ಡಿ ಅವರು ಮಾತನಾಡಿ, ನೆರೆಯ ಆಂಧ್ರದ ಗದ್ವಾಲ್ ಪಟ್ಟಣವು ಈ ಮೊದಲು ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. ರಾಯಚೂರು ನಗರವು ಕರ್ನಾಟಕಕ್ಕೆ ಸೇರ್ಪಡೆಗೊಂಡ ನಂತರದಲ್ಲಿ ಭೌಗೋಳಿಕವಾಗಿ ಜಿಲ್ಲೆಯು ಪ್ರತ್ಯೇಕವಾಗಿದ್ದರೂ ವಿವಿಧ ಕ್ಷೇತ್ರಗಳಲ್ಲಿ ಗದ್ವಾಲ್ ಮತ್ತು ರಾಯಚೂರು ನಗರಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಆಂಧ್ರದ ಶಾಸಕರು, ಸಚಿವರನ್ನು ಮುಂಗಾರು ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಹೇಳಿದರು.
ಸಮಾರಂಭದ ಸಾನ್ನಿಧ್ಯವನ್ನು ಶ್ರೀತಿಪ್ಪೇಶ್ವರ ಸ್ವಾಮೀಜಿ, ಅಭಿನವ ರಾಚೋಟಿ ವೀರ ಶಿವಾಚಾರ್ಯರು ವಹಿಸಿದ್ದರು. ಆಂಧ್ರದ ಗದ್ವಾಲ್ ಎಪಿಎಂಸಿ ಅಧ್ಯಕ್ಷ ಗಡ್ಡಂ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಪದ್ಮನಾಭ ರೆಡ್ಡಿ, ಪ್ರಮುಖರಾದ ನಾಗೇಂದ್ರ ರೆಡ್ಡಿ, ದಾಮೋದರ ರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಲಾಲಪ್ಪ, ಶ್ರೀನಿವಾಸರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು ಇದ್ದರು.