ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಉತ್ತರದ 2 ಗ್ರಾಮ ಸಂತ್ರಸ್ತರಿಗೆ 'ಸಂರಕ್ಷಾ'

Rashmi Kasaragodu
Updated On : 26 Jun 2013, 11:26 am

ಕನ್ನಡಪ್ರಭ ವಾರ್ತೆ   ರಾಯಚೂರು   ಜೂ.25
ಪ್ರವಾಹದಿಂದ ತತ್ತರಿಸಿದ್ದ ಮಂತ್ರಾಲಯಕ್ಕೆ ಭೌತಿಕ ಶ್ರೀಮಂತಿಕೆ ತಂದುಕೊಟ್ಟ ಶ್ರೀಮಠದ ಆಡಳಿತವು ಈಗ ಉತ್ತರಾಖಂಡ ಪ್ರವಾಹ ಸಂತ್ರಸ್ತರ ನೆರವಿಗೆ ಮುಂದಾಗಿದೆ. ಎರಡು ಗ್ರಾಮಗಳ ದತ್ತು ಪಡೆಯುವಿಕೆ ಮತ್ತು ಪುನಾ ಸ್ಥಾಪನೆ ಜತೆಗೆ ಸಂತ್ರಸ್ತರಿಗೆ ತುರ್ತು ಅವಶ್ಯಕ ಸಾಮಗ್ರಿ ಪೂರೈಕೆ ಮತ್ತು ಪರಿಹಾರ ಕೈಗೊಳ್ಳಲು ನಿರ್ಧರಿಸಿದೆ.
ಮಂತ್ರಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಮಠದ ಕಿರಿಯ ಶ್ರೀಗಳಾದ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠವು ಇದುವರೆಗೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದವರ ನೆರವಿಗೆ ಮುಂದಾಗಿದೆ. ಅದರಂತೆ ಉತ್ತರಾಖಂಡದಲ್ಲಿ ಪ್ರವಾಹದಿಂದ ತತ್ತರಿಸಿರುವವರ ನೆರವಿಗಾಗಿ ಸಂರಕ್ಷಾ ಎಂಬ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ಪರಿಹಾರ ಕಾರ್ಯದಲ್ಲಿ..: ಈಗಾಗಲೇ ಶ್ರೀಮಠವು ಪ್ರವಾಹ ಪರಿಹಾರ ಕಾರ್ಯಕ್ಕೆ ತೊಡಗಲು ಸಿದ್ಧತೆ ನಡೆಸಿದ್ದು ನವದೆಹಲಿಯ ಮಠದಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಆಶ್ರಯ ನೀಡಿ ಊಟ, ವಸತಿ ಮತ್ತು ಅವರ ಊರುಗಳಿಗೆ ಪ್ರಯಾಣಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಂರಕ್ಷಾ ಯೋಜನೆ ಅಡಿ ಉತ್ತರಾಖಂಡದ ಪ್ರವಾಹ ಸಂತ್ರಸ್ತರಿಗೆ ದಾನಿಗಳ ಮೂಲಕ ನೆರವು ಒದಗಿಸಲಾಗುತ್ತದೆ. ಆರಂಭದಲ್ಲಿ ಜೂ. 30ರಂದು ದೆಹಲಿಯಿಂದ ಉತ್ತರಾಖಂಡದ ಹರಿದ್ವಾರ ಮತ್ತಿತರೆಡೆ ಸಂಕಷ್ಟಕ್ಕೆ ಸಿಲುಕಿದವರಿಗೆ ಬೆಚ್ಚನೆಯ ಹೊದಿಕೆಗಳು, ಆಹಾರ ಸಾಮಗ್ರಿ ಸೇರಿದಂತೆ ವಿವಿಧ ಪರಿಹಾರ ಸಾಮಗ್ರಿಗಳನ್ನು ಎರಡು ಟ್ರಕ್ಗಳಲ್ಲಿ ಕಳುಹಿಸಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಹರಿದ್ವಾರದಲ್ಲೂ ಪರಿಹಾರ ಶಿಬಿರ: ಅದೇ ರೀತಿ ಹರಿದ್ವಾರದಲ್ಲಿ ಪರಿಹಾರ ಶಿಬಿರ ಸ್ಥಾಪಿಸುವ ಮೂಲಕ ಅಲ್ಲಿಗೆ ಆಗಮಿಸುವ ಸಂತ್ರಸ್ತರಿಗೆ ಅಗತ್ಯ ನೆರವು ಕಲ್ಪಿಸಲಾಗುತ್ತದೆ. ಶ್ರೀಮಠದ ನೂರಾರು ಅನುಯಾಯಿಗಳು ಈಗಾಗಲೇ ಉತ್ತರಾಖಂಡ ರಾಜ್ಯದಲ್ಲಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಲು ಸಿದ್ಧರಾಗಿದ್ದಾರೆ. ಜು.10ರಿಂದ ಈ ನಿಟ್ಟಿನಲ್ಲಿ ಶಿಬಿರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.
2 ಗ್ರಾಮಗಳ ದತ್ತು: ಸಂರಕ್ಷಾ ಯೋಜನೆ ಅಡಿ ಉತ್ತರಾಖಂಡ ರಾಜ್ಯದ ಎರಡು ಜಿಲ್ಲೆಗಳ ತಲಾ ಒಂದು ಗ್ರಾಮವನ್ನು ದತ್ತು ಪಡೆದು ಸಂಪೂರ್ಣವಾಗಿ ಗ್ರಾಮ ಪುನಾ ನಿರ್ಮಾಣ ಕಾರ್ಯ ಶ್ರೀಮಠದಿಂದ ನೆರವೇರಿಸಲು ಹಿರಿಯ ಶ್ರೀಗಳಾದ ಶ್ರೀಸುಯತೀಂದ್ರ ತೀರ್ಥರು ನಿರ್ಧರಿಸಿ ಸೂಚಿಸಿದ್ದಾರೆಂದು ಹೇಳಿದರು.
ಈಗಾಗಲೇ ಗ್ರಾಮಗಳ ಪುನರೋತ್ಥಾನ ಮತ್ತು ಪರಿಹಾರ ಕಾರ್ಯದ ಮೇಲುಸ್ತುವಾರಿಗೆ ಹಿರಿಯ ಶ್ರೀಗಳ ಗೌರವಾಧ್ಯಕ್ಷತೆ ಹಾಗೂ ತಮ್ಮ ಗೌರವಪಾಧ್ಯಕ್ಷತೆಯ ಸಮಿತಿ ರಚಿಸಿದ್ದು, ಅಧ್ಯಕ್ಷತೆಯನ್ನು ಜಸ್ಟೀಸ್ ಎಂ.ಎನ್. ವೆಂಕಟಾಚಲಯ್ಯ ಅವರಿಗೆ ವಹಿಸಿದ್ದು, ಅನೇಕ ಪ್ರಮುಖರಿರುವ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
15- 20 ಕೋಟಿ ಅಂದಾಜು ವೆಚ್ಚ: ಈ ಸಮಿತಿಯ ನೇತೃತ್ವದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತದೆ ಎಂದ ಶ್ರೀಸುಬುಧೇಂದ್ರ ತೀರ್ಥರು, ಶ್ರೀಮಠವು ಸುಮಾರು 15ರಿಂದ 20 ಕೋಟಿ ವೆಚ್ಚದ ಅಂದಾಜಿನ ಪರಿಹಾರ ಕಾರ್ಯ ಕೈಗೊಳ್ಳಲಿದೆ. ಪರಿಹಾರ ಕಾರ್ಯದ ನೋಡಲ್ ಅಧಿಕಾರಿಯಾಗಿ ಶ್ರೀಮಠದ ಹಿರಿಯ ಅಧಿಕಾರಿ ಜಿ.ಕಿಶನರಾವ್ ಅವರನ್ನು ನೇಮಿಸಿದ್ದಾಗಿ ತಿಳಿಸಿದರು.
ದೇಶದಲ್ಲಿ ವಿವಿಧೆಡೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಶ್ರೀಮಠವು ನೆರವಿಗೆ ಬಂದಿದೆ. ತಮಿಳುನಾಡಿನ ಸುನಾಮಿ, 2009ರಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ವೇಳೆಯೂ ಪರಿಹಾರ ಕಾರ್ಯ ಕೈಗೊಂಡು ತಾನು ಸಮಾಜಮುಖಿ ಎಂದು ಸಾಬೀತು ಮಾಡಿದೆ ಎಂದು ಹೇಳಿದರು.


ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗೆ ಮಂತ್ರಾಲಯದ ಮಠವು ಕೈಗೊಳ್ಳುವ ನೆರವಿಗೆ ಉದಾರತೆಯಿಂದ ದೇಣಿಗೆ ಸಲ್ಲಿಸುವವರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು.
ಉತ್ತರಾಖಂಡ ಫ್ಲಡ್
ರಿಲೀಫ್ ಫಂಡ್
ವ್ಯವಸ್ಥಾಪಕರು,
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯ.
ಸಂಪರ್ಕ ಸಂಖ್ಯೆಗಳು
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ನವದೆಹಲಿ- 011 26708642
ಶ್ರೀಪತಿ- 09440077284
ಜಿ. ಕಿಶನರಾವ್- 09492944316
ರಘುನಂದನ್- 09032714705

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement