ಕುಂಬಾರಿಕೆ ತ್ಯಜಿಸಿ ಅನ್ಯ ನಗರಗಳಿಗೆ ಗುಳೆ
ಯಾದಗಿರಿ: ಜಿಲ್ಲೆಯಲ್ಲಿ ಕುಂಬಾರರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕಿಯವಾಗಿ ತೀರಾ ಹಿಂದುಳಿದಿದ್ದಾರೆ. ಸರ್ಕಾರದ ಸೌಲಭ್ಯಗಳಿಂದ ಈ ಸಮುದಾಯದವರು ವಂಚಿತರಾಗಿದ್ದಾರೆ. ಆದ್ದರಿಂದ ಬಡ ಕುಂಬಾರರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಕುಂಬಾರರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅನ್ಯರ ಪಾಲು: ಪ್ಲಾಸ್ಟಿಕ್ ಯುಗದಲ್ಲಿ ಕುಂಬಾರಿಕೆ ಮಾಡುವುದು ಕಷ್ಟವಾಗಿರುವುದರಿಂದ ಕುಂಬಾರ ಜನಾಂಗದವರು ಹೊಟ್ಟೆಪಾಡಿಗಾಗಿ ಬೆಂಗಳೂರು, ಹೈದರಾಬಾದ್, ಮುಂಬೈ ಮುಂತಾದ ಮಹಾನಗರಗಳಿಗೆ ಗುಳೆ ಹೊರಟಿದ್ದಾರೆ. ಸರ್ಕಾರದ ಸೌಲಭ್ಯಗಳು ಅಸಲಿ ಕುಂಬಾರರಿಗೆ ಸಿಗದೆ ಅನ್ಯರ ಪಾಲಾಗುತ್ತಿದೆ. ಇದನ್ನು ತಪ್ಪಿಸಿ ನಿಜ ಕುಂಬಾರರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕುಂಬಾರ ಸಮಾಜಕ್ಕೆ ಕೊಡುವ ಸಹಾಯ ಧನ ಈಗಿರುವ ರು. 30 ಸಾವಿರದಿಂದ ರು. 3 ಲಕ್ಷಕ್ಕೆ ಹೆಚ್ಚಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಮಾರಾಟಕ್ಕಾಗಿ ಮಳಿಗೆ ಮತ್ತು ಮಡಿಕೆ ಮಾಡುವುದಕ್ಕಾಗಿ 5 ಎಕರೆ ಭೂಮಿಯನ್ನು ನೀಡಬೇಕು. ಜಿಲ್ಲೆಯ ಪ್ರತಿ ಗ್ರಾಪಂ ಮಟ್ಟದಲ್ಲಿ ಬರುವ ಆಶ್ರಯ ಮನೆಗಳನ್ನು ಅಲ್ಪ ಸಂಖ್ಯಾತರಾಗಿರುವ ಕುಂಬಾರರಿಗೆ ಮೀಸಲಿಡಬೇಕು. ಗ್ರಾಮೀಣ ಭಾಗದ ಕುಂಬಾರ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಹಾಸ್ಟೆಲ್ ಸೌಲಭ್ಯ ಒದಗಿಸಿಕೊಡಬೇಕು. ನಿಜವಾದ ಕುಂಬಾರರನ್ನು ಗುರುತಿಸಲು, ಮಾಂಸಾಹಾರಿ-ಶಾಖಾಹಾರಿ ಕುಂಬಾರರನ್ನು ಗುರುತಿಸಿ ಪಂಚನಾಮ ಮಾಡಿಸಿ '2ಎ' ಅಡಿಯಲ್ಲಿ ಬರುವ ಮಾಂಸಾಹಾರಿ ಕುಂಬಾರರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮಾಂಸಾಹಾರಿ ಕುಂಬಾರರನ್ನು ಎಸ್ಟಿಗೆ ಸೇರಿಸಬೆಕೆಂದು ಎಂದು ಮನವಿಯಲ್ಲಿ ತಿಳಿಸಿದರು.
ಎಸ್ಟಿ ವರ್ಗಕ್ಕೆ ಸೇರಿಸಿ: ಕಾರವಾರ ಜಿಲ್ಲೆಯಲ್ಲಿ ಕುಂಬಾರ ಜನಾಂಗದವರು ಮಹಾರಾಷ್ಟ್ರದಿಂದ ವಲಸೆ ಬಂದಿದ್ದರಿಂದ ರಾಜ್ಯ ಸರ್ಕಾರ ಅವರನ್ನು ಪ್ರವರ್ಗ-1ರಲ್ಲಿ ಸೇರ್ಪಡೆ ಮಾಡಿದೆ. ನಾವು ಕೂಡಾ ಆಂಧ್ರದಿಂದ ವಲಸೆ ಬಂದಿದ್ದರಿಂದ ಜನ ನಮ್ಮನ್ನು ತೆಲುಗು ಕುಂಬಾರರು ಎಂದು ಗುರುತಿಸುತ್ತಾರೆ. ಆದ್ದರಿಂದ ನಮ್ಮ ಜನಾಂಗವನ್ನು ಎಸ್ಟಿಗೆ ಸೇರಿಸಬೇಕು. ಈ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೆಕೆಂದು ಆಗ್ರಹಿಸಿ ಸಂಘದ ಜಿಲ್ಲಾಧ್ಯಕ್ಷ ಶೇಖರಪ್ಪ ಅರ್ಜುಣಗಿ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ ಅವರಿಗೆ ಮನವಿ ಸಲ್ಲಿಸಿದರು. ಸಾಬಣ್ಣ ಎಂ.ಹೊಸಳ್ಳಿ, ರಾಜೇಂದ್ರಕುಮಾರ ಮುದ್ನಾಳ, ಗುರುಬಸ್ಸಪ್ಪ ಹಾಲಗೇರಾ, ಸಾಬಯ್ಯ ಎಂ.ಹೊಸಳ್ಳಿ, ಈರಣ್ಣ ವಡಿಗೇರಾ, ಸಾಬಣ್ಣ, ಗಾಲೇಪ್ಪ ಬೆಳಗೇರಾ, ನಾಗಪ್ಪ ಹೊನಗೇರಾ, ಅಮಾತೆಪ್ಪ ಕೊಂಕಲ್ ಇತರರು ಇದ್ದರು.
30ರಂದು ಸಭೆ
ಗುಲ್ಬರ್ಗ: ಜಿಲ್ಲಾ ಮಡಿವಾಳರ ಕಲ್ಯಾಣ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಜೂ. 30ರಂದು ಬೆಳಗ್ಗೆ 11 ಗಂಟೆಗೆ ಆದರ್ಶ ನಗರದ ಕೆಸಿಇಡಿಟಿ ಪ್ರೌಢ ಶಾಲೆಯಲ್ಲಿ ಕರೆಯಲಾಗಿದೆ. ವಾರ್ಷಿಕ ಚಟುವಟಿಕೆಗಳು, ಮಡಿವಾಳ ಮಾಚಿದೇವರ ಮಂದಿರ ಮತ್ತು ಸಮುದಾಯ ಭವನ ಹಾಗೂ ವಾರ್ಷಿಕ ಹಣಕಾಸು ವರದಿ ಕುರಿತು ಚರ್ಚಿಸಲಾಗುವುದು ಎಂದು ಅಧ್ಯಕ್ಷ ಶಿವಕುಮಾರ ಮಡಿವಾಳ ಪ್ರಕಟಣೆ ಮೂಲಕ ಕೋರಿದ್ದಾರೆ.