ನಗರದಲ್ಲಿ ಪಾಲಿ ಕ್ಲಿನಿಕ್ ಕೇಂದ್ರ ಕಾರ್ಯಾರಂಭ
ಜಗನ್ನಾಥ ಆರ್. ದೇಸಾಯಿ
ಕನ್ನಡಪ್ರಭ ವಾರ್ತೆ ರಾಯಚೂರು ಜೂ.25
ರಾಜ್ಯದಲ್ಲಿ ಜಾನುವಾರುಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಕೇಂದ್ರಗಳ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಇಂಥ ಕೇಂದ್ರಗಳಿರುವುದು ಹುಬ್ಬಳ್ಳಿ ಮತ್ತು ಬೀದರ್ನಲ್ಲಿ ಮಾತ್ರ. ಈ ಕೊರತೆ ನೀಗಿಸಲು ಸರ್ಕಾರ ನಗರದಲ್ಲಿ ಜಾನುವಾರುಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಸೌಲಭ್ಯ ಒದಗಿಸಿದ್ದು, ಕೇಂದ್ರ ಉದ್ಘಾಟನೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಜಿಲ್ಲೆಯಲ್ಲಿ ಜಾನುವಾರುಗಳು ತೀವ್ರ ಅನಾರೋಗ್ಯದಿಂದ ಬಳಲಿ ಶಸ್ತ್ರಚಿಕಿತ್ಸೆ ನಡೆಸುವ ಅನಿವಾರ್ಯತೆ ಉಂಟಾದರೆ, ಅಂಥ ಸಂದರ್ಭದಲ್ಲಿ ರೈತರು ಹಾಗೂ ಜಾನುವಾರುಗಳ ಮಾಲೀಕರು ದೂರದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಆರ್ಥಿಕವಾಗಿ ಸಂಕಷ್ಟದ ಲ್ಲಿರುವವರು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಅಸಹಾಯಕ ಸ್ಥಿತಿಯಿಂದ ನೊಂದುಕೊಂಡು ಸುಮ್ಮನಾಗುತ್ತಿದ್ದರು. ಆದರೆ ಅಂಥ ಎಲ್ಲ ಸಮಸ್ಯೆ ನಿವಾರಣೆಯಾಗುವ ಕಾಲವಿದು. ಸರ್ಕಾರ ನಗರದಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯ ಕಲ್ಪಿಸಿದೆ.
ಶಸ್ತ್ರಚಿಕಿತ್ಸೆ ಘಟಕ: ನಗರದ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಕಚೇರಿ ಆವರಣದಲ್ಲಿ ಈಗಾಗಲೇ ಹಿಂದುಳಿದ ಪ್ರದೇಶಾಭಿವೃದ್ಧಿ ಅನುದಾನ ರು. 5 ಲಕ್ಷ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಘಟಕವನ್ನು ಸ್ಥಾಪಿಸಿದೆ. ಲಭ್ಯವಿದ್ದ ಕಟ್ಟಡದಲ್ಲಿಯೇ ಕೆಲ ಮಾರ್ಪಾಟು ಮಾಡಿಕೊಂಡು ಕೇಂದ್ರ ಆರಂಭಿಸಲಾಗುತ್ತಿದೆ.
ಈ ಪಾಲಿ ಕ್ಲಿನಿಕ್ ನಲ್ಲಿ ಈಗಾಗಲೇ ಶಸ್ತ್ರಚಿಕಿತ್ಸೆಗೆ ಅವಶ್ಯಕ ವೈದ್ಯಕೀಯ ಯಂತ್ರೋಪಕರಣಗಳನ್ನು ಒದಗಿಸಿದ್ದು, ಕಟ್ಟಡದಲ್ಲಿ ಸ್ಥಾಪಿಸಲಾಗಿದೆ. ಶಸ್ತ್ರಚಿಕಿತ್ಸೆಗೂ ಮುನ್ನ ನಡೆಸುವ ವಿವಿಧ ತಪಾಸಣೆಗಳಿಗೆ ಪ್ರಯೋಗಾಲಯವನ್ನೂ ನೀಡಲಾಗಿದೆ. ಈ ಮೂಲಕ ಜಾನುವಾರುಗಳನ್ನು ಆರಂಭದಲ್ಲಿಯೇ ಪರೀಕ್ಷಿಸಲು ಸೌಲಭ್ಯ ಒದಗಿಸಲಾಗಿದೆ.
18ನೇ ಜಾನುವಾರು ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 6.24 ಲಕ್ಷ ದೊಡ್ಡ ಜಾನುವಾರುಗಳು ಹಾಗೂ ಕುರಿ, ಮೇಕೆ 9.43 ಲಕ್ಷ ಸೇರಿ ಒಟ್ಟು 16.38ಲಕ್ಷ ಜಾನುವಾರುಗಳಿವೆ. ಸದ್ಯದ ಮಾಹಿತಿಯಂತೆ ಆರಂಭದಲ್ಲಿ ಕೇವಲ ಸಣ್ಣ ಜಾನುವಾರುಗಳಾದ ಕುರಿ, ಮೇಕೆ, ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯಬಿದ್ದಲ್ಲಿ ನಗರದಲ್ಲಿಯೇ ನಡೆಸಲಾಗುತ್ತದೆ.
ಅನುಕೂಲ: ಈ ಕುರಿತು 'ಕನ್ನಡಪ್ರಭ' ಜೊತೆ ಮಾತನಾಡಿದ ಜಿಲ್ಲಾ ಪಶು ವೈದ್ಯಕೀಯ ಮತ್ತು ಸೇವೆಗಳ ಇಲಾಖೆಯ ಉಪನಿರ್ದೇಶಕ ಡಾ.ಟಿ. ಸೋಮಸುಂದರಂ, ಸದ್ಯ ಈ ಸೌಲಭ್ಯ ಕೇವಲ ಬೀದರ್, ಹುಬ್ಬಳ್ಳಿಗಳಲ್ಲಿ ಲಭ್ಯವಿದೆ. ಆದರೆ ನಗರದಲ್ಲಿಯೂ ಶಸ್ತ್ರಚಿಕಿತ್ಸೆ ಸೌಲಭ್ಯ ಕೇಂದ್ರ ಆರಂಭದ ಮೂಲಕ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಜಿಪಂ ಸಿಇಒ ಆಗಿದ್ದ ಮನೋಜ್ ಜೈನ್ ಅವರ ಅವಧಿಯಲ್ಲಿ ರೂಪಗೊಂಡ ಈ ಯೋಜನೆಯು ಈಗ ಜಾರಿಗೆ ಬಂದಿದ್ದು, ಜಿಲ್ಲೆಯ ರೈತರಿಗೆ ನೆರವಾಗುವ ಎಲ್ಲ ಲಕ್ಷಣಗಳಿವೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಆದರೂ ಲಭ್ಯವಿರುವ ಸಿಬ್ಬಂದಿಯನ್ನೇ ಬಳಸಿ ಸಣ್ಣ ಜಾನುವಾರುಗಳಿಗೆ ಶಸ್ತ್ರಚಿಕಿತ್ಸೆ ಸೌಲಭ್ಯ ದೊರೆಯುವಂತೆ ಮಾಡಲಾಗುತ್ತಿದೆ. ರೈತರಿಗೆ ಇದರಿಂದ ಪ್ರಯೋಜನವಾಗುವುದರಲ್ಲಿ ಸಂದೇಹವಿಲ್ಲ.