ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಾಲಯ ಪುನರುತ್ಥಾನಕ್ಕೆ 18 ಕೋಟಿ ದೇಣಿಗೆ: ಶ್ರೀಗಳು

Rashmi Kasaragodu
Updated On : 26 Jun 2013, 11:27 am

ಕನ್ನಡಪ್ರಭ ವಾರ್ತೆ   ರಾಯಚೂರು   ಜೂ.25
2009ರ ಪ್ರವಾಹದ ನಂತರದಲ್ಲಿ ಮಂತ್ರಾಲಯದ ಪುನರುತ್ಥಾನ ಕಾರ್ಯಕ್ಕಾಗಿ ದಾನಿಗಳಿಂದ ಮತ್ತು ಶ್ರೀಮಠದಿಂದ ಒಟ್ಟು 18 ಕೋಟಿಗೂ ಹೆಚ್ಚಿನ ಹಣ ದೊರೆತಿದ್ದು, ಶ್ರೀಗಳ ಪಾದಕಾಣಿಕೆಯಿಂದ 8 ಕೋಟಿ ಸಂಗ್ರಹಿಸಲಾಗಿದೆ ಎಂದು ಶ್ರೀಮಠದ ಹಿರಿಯ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಶ್ರೀಸುಯಮೀಂದ್ರಾಚಾರ್ಯ ತಿಳಿಸಿದರು.
ಮಂತ್ರಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಮಂತ್ರಾಲಯ ಮತ್ತು ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಶ್ರೀಮಠದಿಂದ ದಾನಿಗಳು ಮತ್ತು ಶ್ರೀಮಠದಿಂದ ಲಭ್ಯವಾದ ಮೊತ್ತಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣ ವೆಚ್ಚವಾಗಿದ್ದರಿಂದ ಗುತ್ತಿಗೆದಾರರಿಗೆ 60 ಲಕ್ಷ ಬಿಲ್ ಪಾವತಿಸಬೇಕಿದೆ. ಅದಕ್ಕಾಗಿ ದಾನಿಗಳ ಹುಡುಕಾಟ ನಡೆದಿರುವುದಾಗಿ ತಿಳಿಸಿದರು.
ಸಿಜಿಎಫ್ ಅನುದಾನ- 5 ವರ್ಷ ರಿಯಾಯ್ತಿ: ಪ್ರವಾಹದ ನಂತರದಲ್ಲಿ ಕರ್ನಾಟಕ ಸರ್ಕಾರದಿಂದ 10 ಕೋಟಿ ದೊರೆತಿದ್ದು, ಆಂಧ್ರ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ದೊರೆತಿಲ್ಲವಾದರೂ ಶ್ರೀಮಠಕ್ಕೆ ಸರ್ಕಾರದಿಂದ ಐದು ವರ್ಷಗಳವರೆಗೆ ಪ್ರತಿ ವರ್ಷ 8ರಿಂದ 10 ಕೋಟಿ ಹಣ ಉಳಿತಾಯವಾಗಲಿದೆ. ಇದಕ್ಕೆ ಕಾರಣ ಸರ್ಕಾರಕ್ಕೆ ಪ್ರತಿ ವರ್ಷ ಶ್ರೀಮಠ ಪಾವತಿಸಬೇಕಿದ್ದ ಶೇ.9ರಷ್ಟು ಸಿಜಿಎಫ್ ಅನುದಾನದಿಂದ ರಿಯಾಯಿತಿ ಸಿಕ್ಕಿರುವುದು.
ಪ್ರವಾಹ ಪರಿಹಾರ ಕಾರ್ಯಕ್ಕೆ ಲಭ್ಯವಾದ 18,00,61,494 ಪೈಕಿ 36,54,509 ಹಣ ಬ್ಯಾಂಕ್ ಖಾತೆಗಳಲ್ಲಿದ್ದು, ಆ ಮೊತ್ತದಲ್ಲಿ ಎಸ್ಬಿಐ ಬ್ಯಾಂಕಿನಿಂದ ಪಡೆದ ಸಾಲಕ್ಕೆ 30,00,000 ಸಂದಾಯ ಮಾಡಲಾಗುತ್ತದೆ ಎಂದು ಹೇಳಿದರು.
ವಸತಿ ಗೃಹ ನಿರ್ಮಾಣ: ಸದ್ಯ ಮಂತ್ರಾಲಯದಲ್ಲಿ ಶ್ರೀಮಠಕ್ಕೆ ಸೇರಿದ ವಸತಿಗೃಹಗಳಿಲ್ಲ. ಎಲ್ಲ ವಸತಿ ಗೃಹಗಳನ್ನು ದಾನಿಗಳೇ ನಿರ್ಮಿಸಿ ಕೊಟ್ಟಿದ್ದು. ಅದರಿಂದಾಗಿ ವಸತಿ ಸವಲತ್ತುಗಳ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಮಠದಿಂದ ಈಗಾಗಲೇ 300 ಕೊಠಡಿಗಳಿರುವ ವಸತಿ ಗೃಹಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ಮುಂದಿನ ವರ್ಷದ ಆರಾಧನೆ ವೇಳೆಗೆ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.
ನಷ್ಟು ತುಂಬಿಸಲು ಕ್ರಮ: 2009ರ ಪ್ರವಾಹ ಸಂದರ್ಭದ ನಂತರದ ತಿಂಗಳುಗಳಲ್ಲಿ ಶ್ರೀಮಠಕ್ಕೆ 18 ಕೋಟಿಯಷ್ಟು ಆದಾಯದಲ್ಲಿ ಖೋತಾ ಆಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಉಳಿತಾಯದ ಕ್ರಮಗಳಿಂದಾಗಿ ಈಗ ಆದಾಯದ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಹೇಳಿದರು.
ಶ್ರೀಮಠದಿಂದ ಮಂತ್ರಾಲಯ ಗ್ರಾಮದಲ್ಲಿ ಎರಡು ಮಿನಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದ್ದು, ಬಡವರಿಗೆ ಅನುಕೂಲ ಕಲ್ಪಿಸಲು 5 ಸಾವಿರ ವೆಚ್ಚದಲ್ಲಿ ಎಲ್ಲ ಸೌಲಭ್ಯಗಳಿರುವ ವ್ಯವಸ್ಥೆ ಇದಾಗಲಿದೆ ಎಂದ ಅವರು, ಬರಗಾಲದ ಹಿನ್ನೆಲೆ ಶ್ರೀಗಳಾದ ಶ್ರೀಸುಯತೀಂದ್ರ ತೀರ್ಥರು ಚಾತುರ್ಮಾಸದ ವೇಳೆ ದೊರೆತ ಕಾಣಿಕೆಯಿಂದ 17 ಗೋಶಾಲೆಗಳಿಗೆ ಮೇವು ಒದಗಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
ಮಂತ್ರಾಲಯದಲ್ಲಿನ ವಸತಿ ಗೃಹಗಳಲ್ಲಿ ಸ್ವಚ್ಛತೆ ನಿರ್ವಹಣೆ ಕಾರ್ಯವನ್ನು ಸುಲಭ್ ಸಂಸ್ಥೆಗೆ ವಹಿಸಿದ್ದು, ಭಕ್ತರಿಗೆ ಸುರಕ್ಷಿತ ಪರಿಸರ ನಿರ್ಮಾಣ ಶ್ರೀಮಠದ ಮೊದಲಾದ್ಯತೆಯಾಗಿದೆ ಎಂದು ಹೇಳಿದರು. ಈ ಸಂದರ್ಭ ಶ್ರೀಮಠದ ಸಿಬ್ಬಂದಿಯಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement