ಮರಳು ಸಾಗಣೆ ವಿರುದ್ಧ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಸಿಂಧನೂರು ಜೂ.25
ತಾಲೂಕಿನ ಹೆಡಗಿನಾಳದಲ್ಲಿ ಅಕ್ರಮವಾಗಿ ಮರಳು(ಉಸುಕು) ಸಾಗಣೆ ಮಾಡಲಾಗುತ್ತಿದ್ದು ಇದನ್ನು ಕೂಡಲೇ ತಡೆಗಟ್ಟುವಂತೆ ಆಗ್ರಹಿಸಿ ಜೈ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದಲ್ಲಿ ಮರಳು ಸಾಗಣೆ ಮಾಡಲು ಟೆಂಡರ್ ಮೂಲಕ ಉಮೇಶ ಪಾಟೀಲ್ ಎಂಬವರು ಗುತ್ತಿಗೆ ಪಡೆದಿದ್ದಾರೆ. ಅದರಂತೆ ಒಂದು ಘನ ಮೀಟರ್ಗೆ 565ರಂತೆ ಸರ್ಕಾರ ಕರ ಪಾವತಿಸಬೇಕು. ಆದರೆ ಗುತ್ತಿಗೆದಾರ ಪಾಟೀಲ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ವ್ಯಾಪಕ ಮರಳನ್ನು ಯಾವುದೇ ಕರ ಪಾವತಿಸದೆ ಸಾಗಣೆಗೆ ಮೀಸಲಿಟ್ಟ ಸ್ಥಳ ಮಾತ್ರವಲ್ಲದೇ ಬೇರೆ ಸ್ಥಳಗಳಲ್ಲಿಯೂ ಮರಳು ಸಾಗಿಸುತ್ತಿದ್ದಾರೆ.
ಅಲ್ಲದೇ 15 ಜನ ಗ್ಯಾಂಗ್ಮ್ಯಾನ್ಗಳಿರಬೇಕೆಂಬ ನಿಯಮವೂ ಇಲ್ಲಿ ಪಾಲಿಸಲಾಗುತ್ತಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಮರಳು ಸಾಗಿಸಿ ಸರ್ಕಾರಕ್ಕೆ ಶೇ.1ರಷ್ಟು ಮಾತ್ರ ಲೆಕ್ಕ ತೋರಿಸಿ ಶೇ. 99ರಷ್ಟು ಅನಧಿಕೃತವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದಾರೆ.
ಗ್ರಾಮಗಳಲ್ಲಿ ಸಂಗ್ರಹ: ಹೀಗೆ ಸಾಗಿಸಲ್ಪಟ್ಟ ಮರಳನ್ನು ತಾಲೂಕಿನ ಆಯನೂರು, ಕುರುಕುಂದಾ, ತಿಡಿಗೋಳ, ಆರ್.ಎಚ್.ನಂ.4, ಬೂದಿವಾಳ ಕ್ಯಾಂಪ್ ಮುಂತಾದ ಕಡೆಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಕಾರಣ ಸರ್ಕಾರ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಇವರ ವಿರುದ್ಧ ಕಾನೂನುರೀತ್ಯ ಕ್ರಮ ಕೈಗೊಂಡು ಅವರಿಗೆ ನೀಡಿರುವ ಗುತ್ತಿಗೆಯನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ವೇದಿಕೆಯ ತಾಲೂಕಾಧ್ಯಕ್ಷ ವೀರೇಶ ಭಾವಿಮನಿ ಮನವಿಯಲ್ಲಿ ಎಚ್ಚರಿಸಿದರು.
ಈ ವೇಳೆ ವೇದಿಕೆಯ ತಾಲೂಕು ಸಂಘಟನಾ ಕಾರ್ಯದರ್ಶಿ ಹನುಮಂತ ಯರದಿಹಾಳ, ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯಕ, ಕಾರ್ಯದರ್ಶಿ ಟಿಪ್ಪುಸುಲ್ತಾನ, ಮಾಡಸಿರವಾರ ಗ್ರಾಮ ಘಟಕದ ಅಧ್ಯಕ್ಷ ನರಸಿಂಹ, ಉಪಾಧ್ಯಕ್ಷ ಅಮರೇಶ, ಆಸೀಫ್, ಮೌಲಾಲಿ, ಖಾಜಾ ಹುಸೇನ್, ಶಿವರಾಜ, ಶೌಕತ್, ಮುಸ್ತಾಫ ಬಸವರಾಜ, ರಾಜಾಸಾಬ, ಕರಿಯಪ್ಪ, ಚನ್ನಬಸವ, ಹನುಮಂತ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.