ರೆಡ್ಡಿ ಮಿಲ್ಕ್ ಪಾರ್ಲರ್ ಏಜೆನ್ಸಿ ರದ್ದತಿಗೆ ಕನ್ನಡ ಚಳವಳಿ ಆಗ್ರಹ
ಸಿಂಧನೂರು: ಕೆಎಂಎಫ್ ಉತ್ಪನ್ನಗಳಾದ ನಂದಿನಿ ಮತ್ತು ಶುಭಂ ಹಾಲಿನ ಪ್ಯಾಕೆಟ್ಗಳನ್ನು ನಿಗದಿತ ಬೆಲೆಗಿಂತ 3ರಿಂದ 4ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ನಗರದ ರೆಡ್ಡಿ ಮಿಲ್ಕ್ ಪಾರ್ಲರ್ ಮಾಲೀಕ ಜಗದೀಶರೆಡ್ಡಿ ಅವರ ಮೇಲೆ ಕ್ರಮ ಕೈಗೊಂಡು ಪರವಾನಗಿ ರದ್ದುಗೊಳಿಸುವಂತೆ ಅಖಿಲ ಕರ್ನಾಟಕ ಕನ್ನಡ ಚಳವಳಿ ಸಮಿತಿಯ ರಾಜ್ಯ ಸಂಚಾಲಕ ಕೆ. ಬಾಳಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಗದೀಶರೆಡ್ಡಿ ಅವರು ಹಾಲು ಖರೀದಿಗೆ ಬರುವ ಗ್ರಾಹಕರೊಡನೆ ದುರಂಹಕಾರದಿಂದ ವರ್ತಿಸುತ್ತಿದ್ದಾರೆ. 8 ಗಂಟೆ ಒಳಗಡೆ ಬಂದರೆ ಮಾತ್ರ 1 ಕೂಲಿಂಗ್ ಚಾರ್ಜ್ ತೆಗೆದುಕೊಳ್ಳುತ್ತಿದ್ದು, ತಡವಾಗಿ ಹೋಗುವ ಗ್ರಾಹಕರಿಗೆ ಪ್ರತಿ ಲೀಟರ್ಗೆ 3ರಿಂದ 4ರಷ್ಟು ಹೆಚ್ಚಿಗೆ ಕೇಳುತ್ತಾರೆ. ಹಾಲಿನ ಪ್ಯಾಕೆಟ್ ಮೇಲಿರುವ ಬೆಲೆ ಎಷ್ಟು, ನೀವು ಕೇಳುತ್ತಿರುವುದೆಷ್ಟು ಎಂದು ಗ್ರಾಹಕರೇನಾದರೂ ಪ್ರಶ್ನಿಸಿದರೆ ಬೇಕಾದರೆ ತೆಗೆದುಕೊಳ್ಳಬಹುದು, ಇಲ್ಲವಾದರೆ ಬಿಡಬಹುದು, ಒತ್ತಾಯವಿಲ್ಲ ಎಂದು ಹೇಳುತ್ತಾರೆ.
ಅಲ್ಲದೆ, ಈ ಬಗ್ಗೆ ಅಧಿಕಾರಿಗಳಿಗೆ ದೂರು ಕೊಡುತ್ತೇವೆಂದು ಹೇಳಿದರೆ ಇಲ್ಲಿ ಏಜೆನ್ಸಿ ಪಡೆಯಲು ಯಾರೂ ಮುಂದೆ ಬರುವುದಿಲ್ಲ. ಹಾಗಾಗಿ ತಾನು ಅಧಿಕಾರಿಗೆ ಅನಿವಾರ್ಯ. ಯಾರು ಎಷ್ಟೇ ದೂರು ಹೇಳಿದರೂ ತನ್ನನ್ನು ಏನೂ ಮಾಡಲಾಗುವುದಿಲ್ಲ ಎಂದು ಉಡಾಫೆಯಿಂದ ಹೇಳುತ್ತಾರೆ. ಕಾರಣ ಗ್ರಾಹಕರಿಗೆ ಕಿರುಕುಳ ನೀಡುತ್ತಾ ಅವರಿಂದ ಮನಬಂದಂತೆ ಹಣ ಕೀಳುತ್ತಿರುವ ಜಗದೀಶರೆಡ್ಡಿ ಅವರ ಏಜೆನ್ಸಿ ರದ್ದುಗೊಳಿಸಿ ಬೇರೆಯವರಿಗೆ ನೀಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.