ವಿಷ ಜಂತುಗಳಿಂದ ಜನತೆ ತತ್ತರ
ಕನ್ನಡಪ್ರಭ ವಾರ್ತೆ, ಮುದಗಲ್, ಜೂ.25
ಸಮೀಪದ ನಾಗರಹಾಳ ಬಸವೇಶ್ವರ ವೃತ್ತದ ಬಳಿಯಿರುವ 63 ಕೆವಿ ವಿದ್ಯುತ್ ಪರಿವರ್ತಕವು ಜೆಸ್ಕಾಂ ಸಿಬ್ಬಂದಿಯ ಅವೈಜ್ಞಾನಿಕ ಕಾರ್ಯನಿರ್ವಹಣೆಯಿಂದ ಪದೇ ಪದೇ ದುರಸ್ತಿಗೀಡಾಗುತ್ತಿದ್ದು, ಸಾರ್ವಜನಿಕರು ಜೀವಭಯದಲ್ಲಿ ಬದುಕುವಂತಾಗಿದೆ.
ಈ ವಾರ್ಡಿನ ಜನತೆ ಒಂದು ತಿಂಗಳಿಂದ ರಾತ್ರಿ ಸಂಪೂರ್ಣ ಕತ್ತಲಿನಲ್ಲಿ ಪರದಾಡುವಂತಾಗಿದೆ. ಈ ವಿಷಯವನ್ನು ಜೆಸ್ಕಾಂ ಮೇಲಾಧಿಕಾರಿಗಳ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಲೈನ್ಮನ್ಗಳು ಸಾರ್ವಜನಿಕರ ಜೊತೆ ಸ್ಪಂದಿಸುತ್ತಿಲ್ಲ. ಇಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣವಾಗಿದೆ.
63 ಕೆವಿ ವಿದ್ಯುತ್ ಪರಿವರ್ತಕಕ್ಕೆ ಸುಮಾರು 200 ಮನೆ, ಏರ್ಟೆಲ್ ಟವರ್, 2 ವೆಲ್ಡಿಂಗ್ ಶಾಪ್, 2 ಕಟ್ಟಿಗೆ ರಂಧ್ರ ಹಾಕುವ ಮಷಿನ್, 1 ಆಯಿಲ್ ಮಿಲ್, 1 ಹಿಟ್ಟಿನ ಗಿರಣಿ, 1 ಖಾರದ ಗಿರಣಿ, 1 ಕಂಪ್ಯೂಟರ್ ತರಬೇತಿ ಕೇಂದ್ರ, ಇನ್ನೂ ಹೆಚ್ಚಿನ ವಿದ್ಯುತ್ ಸಂಪರ್ಕ ನೀಡಿದ್ದರಿಂದ 63 ಕೆವಿ ವಿದ್ಯುತ್ ಸಾಲುವುದಿಲ್ಲ ಎನ್ನುವ ಪರಿಜ್ಞಾನ ಜೆಸ್ಕಾಂ ಸಿಬ್ಬಂದಿಗೆ ಬೇಡವೇ ಎಂದು ಗ್ರಾಮದ ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
ಸಂಪರ್ಕಕ್ಕೆ ಸಿಗದ ಶಾಸಕ ವಜ್ಜಲ್: ಅಲ್ಲದೇ ಕಳಪೆ ಗುಣಮಟ್ಟದ ಪರಿವರ್ತಕಗಳನ್ನು ಅಳವಡಿಸುತ್ತಿರುವುದರಿಂದ ಪದೇ ಪದೇ ಸುಡುತ್ತಿದ್ದು, 6 ತಿಂಗಳಲ್ಲಿ 3 ತಿಂಗಳು ಸಾರ್ವಜನಿಕರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಇತ್ತ ಶಾಸಕ ಮಾನಪ್ಪ ವಜ್ಜಲ್ರು ಸಂಪರ್ಪಕ್ಕೆ ಸಿಗುತ್ತಿಲ್ಲವೆಂದು ಸಾರ್ವಜನಿಕರು ಹಾಗೂ ಸ್ಥಳೀಯ ಕರವೇ ಅಧ್ಯಕ್ಷ ಬಾಲಪ್ಪ ಕನಕೇರಿ ಆರೋಪಿಸಿದ್ದಾರೆ.
ಭೀತಿಯಲ್ಲಿ ಜನತೆ: ಈ ವಾರ್ಡಿನ ಪರಿವರ್ತಕದಿಂದ ಅಧಿಕ ವಿದ್ಯುತ್ ಬಳಕೆಯಾಗುತ್ತಿದೆ. ಇದನ್ನರಿತು ಅಧಿಕಾರಿಗಳು 100 ಕೆವಿ ಪರಿವರ್ತಕ ಅಳವಡಿಸುವ ಗೋಜಿಗೆ ಹೋಗುತ್ತಿಲ್ಲ. ಜನತೆ ಒಂದು ತಿಂಗಳಿಂದ ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ. ವಿದ್ಯಾರ್ಥಿಗಳು ಪಕ್ಕದ ವಾರ್ಡಿನಲ್ಲಿ ತಮ್ಮ ಬಂಧುಗಳ ಸ್ನೇಹಿತರ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ತಿಂಗಳಿನಿಂದ ಕತ್ತಲೆ ಆವರಿಸಿರುವುದರಿಂದ ಈ ವಾರ್ಡಿನ ಮನೆಗಳಲ್ಲಿ ವಿಷಜಂತುಗಳ ಕಾಟ ಕೂಡ ಹೆಚ್ಚಾಗಿ ಸಾರ್ವಜನಿಕರು ಭಯಭೀತರಾಗಿದ್ದಾರೆ.
ಜೆಸ್ಕಾಂ ಸಿಬ್ಬಂದಿ ಸಾರ್ವಜನಿಕರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಈ ಬಾರಿಯಾದರೂ ವಿದ್ಯುತ್ ಪರಿವರ್ತಕ ಬದಲಾಯಿಸುವಾಗ ಗುಣಮಟ್ಟದ 100 ಕೆವಿ ಟಿಸಿ ಜೋಡಿಸಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
ಮೊಂಡುತನ ಬಿಟ್ಟು ಸಮಸ್ಯೆಗೆ ಸ್ಪಂದಿಸಿ: ಜೆಸ್ಕಾಂ ತನ್ನ ಮೊದಲಿನ ಮೊಂಡುತನವನ್ನು ಮತ್ತೆ ಮುಂದುವರಿಸಿದರೆ, ಸ್ಥಳೀಯ ಕರವೇ ಅಧ್ಯಕ್ಷ ಬಾಲಪ್ಪ ಕನಕೇರಿ, ಚಂದ್ರಶೇಖರಸ್ವಾಮಿ ಗದ್ಗಿಮಠ ಹಾಗೂ ಸಾರ್ವಜನಿಕರು ಜೆಸ್ಕಾಂ ವಿರುದ್ಧ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.