ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹ

Rashmi Kasaragodu
Updated On : 26 Jun 2013, 11:31 am

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಜೂ.25
ಉತ್ತರಾಖಂಡದಲ್ಲಿ ಪ್ರವಾಹಪೀಡಿತ ಸಂತ್ರಸ್ತರಿಗೆ ನೆರವು ನೀಡಲು ಇಲ್ಲಿನ ಎಸ್ಯುಸಿಐ ಜಿಲ್ಲಾ ಸಮಿತಿ ಮುಖಂಡರು ಮಂಗಳವಾರ ನಗರದಲ್ಲಿ ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡಿದರು.
ಜಿಲ್ಲಾ ಸಮಿತಿ ಸದಸ್ಯೆ ವಿ. ನಾಗಮ್ಮಾಳ್ ಮಾತನಾಡಿ, ಉತ್ತರ ಭಾರತದಲ್ಲಿ ಬೀಳುತ್ತಿರುವ ಮಳೆಯ ಅಬ್ಬರ ತೀವ್ರವಾಗಿದೆ. ಹಲವೆಡೆ ಈ ಮಳೆಯಿಂದ ಭೂ ಕುಸಿತಗಳು ಸಂಭವಿಸಿ ಸಾವುಗಳಾಗಿವೆ. ಇನ್ನುಳಿದವರಿಗೆ ಭದ್ರತೆಯಿಲ್ಲ. ಅಲ್ಲದೆ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಹೆಣಗಳು ಲೆಕ್ಕಕ್ಕೆ ಸಿಗುತ್ತಿಲ್ಲ. ಉತ್ತರ ರಾಜ್ಯದ ದುರ್ಗಮ ಬೆಟ್ಟಗುಡ್ಡಗಳಲ್ಲಿ ಹಸಿವು, ನೀರಡಿಕೆಯಿಂದ ತತ್ತರಿಸುತ್ತಾ ರಕ್ಷಣೆಗಾಗಿ ಕಾದಿರುವ ಸಾವಿರಾರು ಸಂತ್ರಸ್ತರ ಜೀವ ತೀವ್ರ ಆಪತ್ತಿನಲ್ಲಿ ಸಿಲುಕಿದೆ ಎಂದರು.
ಪರದಾಟ: ಸಮರ್ಪಕ ಆಶ್ರಯ ಸಿಕ್ಕಿಲ್ಲ. ನೀರಡಿಕೆ, ಹಸಿವಿನಿಂದಲೂ ಜನ ಪರದಾಡುತ್ತಿದ್ದಾರೆ. ಒಟ್ಟಾರೆ ಘಟನೆಯು ನಮ್ಮ ಅಂತಃಕರಣವನ್ನೇ ಅಲ್ಲಾಡಿಸುತ್ತದೆ. ಅವರ ಸ್ಥಿತಿಯು ಚಿಂತಾಜನಕವಾಗಿದೆ. ಆ ನಿರಾಶ್ರಿತರಿಗೆ, ಸಂತ್ರಸ್ತರಿಗೆ ಭರವಸೆಯ ಮಾನವೀಯ ಸ್ಪಂದನೆಯ ಆಸರೆ, ನೆರವು ಅತ್ಯಂತ ಅವಶ್ಯಕವಾಗಿದೆ.
ಈ ದುರಂತವನ್ನು ಸರ್ಕಾರವು ರಾಷ್ಟ್ರೀಯ ದುರಂತ ಎಂದು ಘೋಷಿಸದೇ ಇರುವುದೇ ಒಂದು ದುರಂತವಾಗಿದೆ. ಸರ್ಕಾರಕ್ಕೆ ಪೂರ್ವ ಸೂಚನೆಯಿದ್ದರೂ, ಜನರ ರಕ್ಷಣೆ ಕಾರ್ಯ ಆರಂಭಿಸದಿರುವುದು ಸರ್ಕಾರದ ಹೃದಯವಿಲ್ಲದ ಕ್ರಮವಾಗಿದೆ. ಹಲವು ಅಕ್ರಮ, ದರೋಡೆಗಳನ್ನು ತಡೆಗಟ್ಟಿ ಜನರಿಗೆ ಭದ್ರತೆಯನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಸೋತಿದೆ ಎಂದು ಆರೋಪಿಸಿದರು.
ರಕ್ಷಣಾ ಕಾರ್ಯ: ಸರ್ಕಾರವು ಈ ದುರಂತವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಿ, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯವನ್ನು ಕೈಗೆತ್ತಿಕೊಂಡು ಅಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯಗಳಿಗೆ ತಡೆಹಾಕಿ ಜನರಲ್ಲಿ ಭರವಸೆಯನ್ನು ಮೂಡಿಸಿ, ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಕಾ. ರಾಮಣ್ಣ ಎಸ್.ಇಬ್ರಾಹಿಂಪುರ್, ಗೌಸ್ ಪಟೇಲ್, ಸಂತೋಷಕುಮಾರ್, ಎಸ್.ಎಂ. ಶರ್ಮಾ, ಮಹೇಶ ಎಸ್.ಬಿ., ಮಹೇಶ ನಾಡಗೌಡ, ಡಾ. ಸೀಮಾ ದೇಶಪಾಂಡೆ, ಭಾಗಣ್ಣ ಬಿ.ಬುಕ್ಕಾ, ಗುಂಡಮ್ಮ ಮಡಿವಾಳ, ಶಂಕರ್ ಹೂಗಾರ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement