ಪೂರೈಕೆ ತಡೆಗೆ ಹರಸಾಹಸ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.26
ಜಿಲ್ಲೆಯ ವಿವಿಧೆಡೆ ಆರ್ಸೆನಿಕ್ ಮತ್ತು ಫ್ಲೋರೈಡ್ಯುಕ್ತ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸುವ ಯೋಜನೆ ಜಾರಿಗೆ ಸಚಿವ ಎಚ್.ಕೆ. ಪಾಟೀಲ್ ಜು.1ರ ಗಡುವು ನೀಡಿರುವುದು ಜಿಲ್ಲಾಡಳಿತಕ್ಕೆ ಸಂಕಷ್ಟ ತಂದಿದೆ. ದಿಢೀರ್ ಎದುರಾದ ಸವಾಲು ಎದುರಿಸಲು ಅಧಿಕಾರಿಗಳು ಹೆಣಗಾಡುವಂತಾಗಿದೆ.
ಆರ್ಸೆನಿಕ್ ಮತ್ತು ಫ್ಲೋರೈಡ್ಯುಕ್ತ ಕುಡಿಯುವ ನೀರು ಮಾನವನ ಆರೋಗ್ಯಕ್ಕೆ ಅಪಾಯಕಾರಿ ಎಂಬ ಕಾರಣಕ್ಕೆ ದಿಢೀರ್ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಸರ್ಕಾರದ ಸೂಚನೆಯೇ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ಯಾವುದೇ ಪೂರ್ವ ಸಿದ್ಧತೆಯಿಲ್ಲದೇ ಗಡುವು ನಿಗದಿ ಮಾಡಿದ್ದು ಒತ್ತಡ ಹೆಚ್ಚಿಸಿದ್ದು, ಅಧಿಕಾರಿಗಳು ಪರದಾಡುವಂತಾಗಿದೆ.
ದಿಢೀರ್ ಪ್ರವಾಸ ಕೈಗೊಂಡಿದ್ದರು: ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಫ್ಲೋರೈಡ್ಯುಕ್ತ ನೀರು ಪೂರೈಕೆಯಾಗುತ್ತಿದೆ. ತೀರಾ ಇತ್ತೀಚಿನ ದಿನಗಳಲ್ಲಿ ಆರ್ಸೆನಿಕ್ಯುಕ್ತ ನೀರಿನ ಪೂರೈಕೆಯ ಬಗ್ಗೆಯೇ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್, ದೇವದುರ್ಗ ತಾಲೂಕಿನ ವಂದಲಿ, ಪಲಕನಮರಡಿ, ಮಾನವಿ ತಾಲೂಕಿನ ಪಾಮನಕಲ್ಲೂರು, ಕವಿತಾಳ ಮತ್ತಿತರೆಡೆ ಈ ನೀರಿನಿಂದಾಗುವ ಸಮಸ್ಯೆ ಬಗ್ಗೆ ಸಾರ್ವಜನಕರಿಂದ ಅಹವಾಲು ಸ್ವೀಕರಿಸಿದ್ದರು.
ಜು.1ರ ಗಡುವು: ಆನಂತರ ನಗರದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಜು.1ರೊಳಗೆ ಜಿಲ್ಲೆಯಲ್ಲಿ ಗುರುತಿಸಲಾಗಿರುವ 44 ಆರ್ಸೆನಿಕ್ ಮತ್ತು ಫ್ಲೋರೈಡ್ಯುಕ್ತ ನೀರು ಪಡೆಯುತ್ತಿರುವ ಗ್ರಾಮಗಳಲ್ಲಿನ ಕೊಳವೆಬಾವಿಗಳನ್ನು ಮುಚ್ಚಿ ಅದರ ಬದಲಿಗೆ ಪರ್ಯಾಯವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಅದರಂತೆ ಸಚಿವರ ಆದೇಶ ಪಾಲನೆಗೆ ಮುಂದಾದ ಅಧಿಕಾರಿಗಳಿಗೆ ಆದೇಶ ಪಾಲನೆ ಅಷ್ಟು ಸರಳ ಸುಲಭವಲ್ಲ ಎಂಬುದು ಅನುಭವಕ್ಕೆ ಬಂದಿದೆ. ಜಿಲ್ಲೆಯಲ್ಲಿ ಕಳೆದ ದಶಕಕ್ಕೂ ಹಿಂದಿನ ಅನೇಕ ಕುಡಿಯುವ ನೀರಿನ ಯೋಜನೆಗಳು ಈಗಲೂ ಕುಂಟುತ್ತಾ ಸಾಗಿವೆ. ದೇವದುರ್ಗ ತಾಲೂಕಿನ ಸಲಿಕ್ಯಾಪುರ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೊಂಡು ದಶಕ ಕಳೆದರೂ ಗ್ರಾಮಕ್ಕೆ ನೀರು ಇನ್ನೂ ತಲುಪಿಲ್ಲ.
ಗೊಂದಲದಲ್ಲಿ ಅಧಿಕಾರಿಗಳು: ಹೀಗೆ ಜಿಲ್ಲಾದ್ಯಂತ ಅನೇಕ ಕಡೆ ಕುಡಿಯುವ ನೀರಿನ ಯೋಜನೆಗಳು ಆಮೆ ವೇಗದಲ್ಲಿ ಸಾಗಿರುವಾಗಲೇ ದಿಢೀರನೆ ಆರ್ಸೆನಿಕ್ ಮತ್ತು ಫ್ಲೋರೈಡ್ಯುಕ್ತ ಕೊಳವೆಬಾವಿಗಳನ್ನು ಮುಚ್ಚುವುದಲ್ಲದೇ ಪರ್ಯಾಯವಾಗಿ ಶುದ್ಧ ಕುಡಿಯುವ ನೀರೊದಗಿಸುವ ಆದೇಶ ಸಚಿವರು ನೀಡಿದ್ದು ಅಧಿಕಾರಿಗಳನ್ನು ಗೊಂದಲಕ್ಕೆ ಬೀಳಿಸಿದೆ.
ಸದ್ಯ ಟ್ಯಾಂಕರ್ ನೀರು: ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಜಿಪಂ ಸಿಇಒ ಜ್ಞಾನಪ್ರಕಾಶ್ ಅವರು, ಆರ್ಸೆನಿಕ್ ಹಾಗೂ ಫ್ಲೋರೈಡ್ಯುಕ್ತ ಕೊಳವೆಬಾವಿಗಳನ್ನು ಮುಚ್ಚುವ ಕಾರ್ಯ ಜಾರಿಯಲ್ಲಿದೆ. ಪರ್ಯಾಯವಾಗಿ ಶುದ್ಧ ಕುಡಿಯುವ ನೀರೊದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಟ್ಯಾಂಕರ್ ಮೂಲಕ ಶುದ್ಧ ನೀರೊದಗಿಸಿ ಮುಂದಿನ ಎರಡು ತಿಂಗಳಿನಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ್ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.
ಒಂದೆಡೆ ಶುದ್ಧ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಜು.1ರ ಗಡುವು ಸಮೀಪಿಸುತ್ತಿದ್ದಂತೆಯೇ ಸಚಿವರ ಆದೇಶ ಪಾಲನೆಗೆ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಶುದ್ಧ ಕುಡಿಯುವ ನೀರೊದಗಿಸುವುದು ಸದ್ಯದ ಮಟ್ಟಿಗೆ ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳುವುದು ಅಧಿಕಾರಿಗಳ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
-ಜಗನ್ನಾಥ ಆರ್. ದೇಸಾಯಿ