'ಬಿಜೆಪಿಗೆ ಬಿಎಸ್‌ವೈ, ರಾಮುಲು ಅವಶ್ಯ'
ಮಸ್ಕಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಎಸ್ಸಾರ್ ಕಾಂಗ್ರೆಸ್‌ನ ಶ್ರೀರಾಮುಲು ಅವರ ಬೆಂಬಲ ಅವಶ್ಯವೆಂದು ಕೊಪ್ಪಳ ಸಂಸದ ಕೆ. ಶಿವರಾಮೇಗೌಡ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣಲು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಶ್ರೀರಾಮುಲು ಪಕ್ಷ ತೊರೆದಿದ್ದೇ ಕಾರಣ ಎಂದು ಹೇಳಿದರು.
ಯಡಿಯೂರಪ್ಪ ಹಾಗೂ ಬಿಜೆಪಿ ತೊರೆದ ಮಾಜಿ ಶಾಸಕರನ್ನು ಪುನಾ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ಜಾರಿಯಲ್ಲಿವೆ. ಯಡಿಯೂರಪ್ಪನವರು ಬಿಜೆಪಿಗೆ ಮರಳಬೇಕೇಂಬುದೇ ರಾಜ್ಯದ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ಚಿತ್ತಾಪುರ ಇದ್ದರು.
ಸಂಸದರಿಂದ ಭೂಮಿ ಪೂಜೆ: ಪಟ್ಟಣದ ವಿವಿಧ ಕಾಮಗಾರಿಗಳಿಗೆ ಕೊಪ್ಪಳ ಸಂಸದ ಕೆ. ಶಿವರಾಮೇಗೌಡ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆಯ 10ಲಕ್ಷ ವೆಚ್ಚದ ಕಾಮಗಾರಿ ಹಾಗೂ ಲಯನ್ಸ್ ಪ್ರಾಥಮಿಕ ಶಾಲೆಯ 7 ಲಕ್ಷ ವೆಚ್ಚದ ಸಮುದಾಯ ಭವನದ ಕಾಮಗಾರಿಗೆ ಅವರು ಭೂಮಿ ಪೂಜೆ ನೆರವೇರಿಸಿದರು. ನಂತರ ಮಸ್ಕಿ ಮಲ್ಲಿಕಾರ್ಜುನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ 4 ಲಕ್ಷ ವೆಚ್ಚದ ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿದರು.
ಶಾಸಕ ಪ್ರತಾಪಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷ ಎಂ.ಅಮರೇಶ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಬಿಜೆಪಿ ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ಚಿತಾಪುರ, ಸೇರಿ ಅನೇಕರಿದ್ದರು.