ರಸ್ತೆ ಅಪಘಾತ: ಒಬ್ಬನ ಸಾವು
ಸಿಂಧನೂರು: ತಾಲೂಕಿನ ಚನ್ನಳ್ಳಿ ಕ್ರಾಸ್ ಬಳಿ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಚನ್ನಳ್ಳಿ ಗ್ರಾಮದ ಬಸವರಾಜ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕಾರಟಗಿಯಿಂದ ಚನ್ನಳ್ಳಿ ಗ್ರಾಮಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಾಗರಾಜ ನಾಯಕ (22) ತಮ್ಮ ದ್ವಿಚಕ್ರ ವಾಹನವನ್ನು ಡಿಕ್ಕಿ ಹೊಡೆಸಿದ ಪರಿಣಾಮ ಬಸವರಾಜ ತಂದೆ ಪಂಪಣ್ಣ ಚನ್ನಳ್ಳಿ (28) ತೀವ್ರ ಗಾಯಗೊಂಡರು. ಚಿಕಿತ್ಸೆಗೆಂದು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ಮೃತಪಟ್ಟರು. ನಾಗರಾಜ ನಾಯಕ ಹಾಗೂ ಹಿಂಬದಿಯ ಸವಾರ ಸುಬ್ರಮಣಿ (20)ಗೆ ತೀವ್ರ ಗಾಯಗಳಾಗಿವೆ. ನಾಗರಾಜ ನಾಯಕ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
ವೃತ್ತಕ್ಕೆ ನಾಮಕರಣ: ಸಮಾಜದ ಒತ್ತಾಯ
ರಾಯಚೂರು: ನಗರದ ಸೂಪರ್ ಮಾರ್ಕೆಟ್‌ನಿಂದ ಹಮ್ ದರ್ದ್ ಶಾಲೆಯ ಮಧ್ಯದಲ್ಲಿರುವ ವೃತ್ತಕ್ಕೆ ಮಹರ್ಷಿ ದದೀಚಿ ಅವರ ಹೆಸರಿಡಬೇಕೆಂದು ಆಗ್ರಹಿಸಿ ಬುಧವಾರ ನಗರದಲ್ಲಿ ದದೀಚಿ ಪ್ರಗತಿ ಸಮಾಜ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಮಹರ್ಷಿ ದದೀಚಿ ಅವರ ಹೆಸರು ಪುರಾಣ ಕಥೆಗಳಲ್ಲಿ ಖ್ಯಾತಿಗಳಿಸಿದ್ದು, ದುಷ್ಟರ ಸಂಹಾರಕ್ಕೆ ದೇಹ ತ್ಯಾಗ ಮಾಡಿದ ಮಹಾನ್ ದಾರ್ಶನಿಕರಾಗಿರುವ ಅವರ ಹೆಸರು ವೃತ್ತಕ್ಕೆ ನಾಮಕರಣ ಮಾಡುವಂತೆ ಒತ್ತಾಯಿಸಿದರು.