ಕಳಪೆ ಬೆಂಡೆ ಬೀಜ: ಪರಿಹಾರಕ್ಕೆ ಆಗ್ರಹ
ಲಿಂಗಸ್ಗೂರು: ಪಟ್ಟಣದ ಖಾಸಗಿ ಅಂಗಡಿಯಲ್ಲಿ ಖರೀದಿಸಿ ಬಿತ್ತನೆ ಮಾಡಿದ ಬೆಂಡೆ ಬೀಜದಿಂದ ಗಿಡ ಬೆಳೆದಿದೆ. ಆದರೆ ಫಲ ಬಂದಿರುವುದಿಲ್ಲ. ಹತ್ತಿ ಬೀಜವೂ ಕಳಪೆಯಿಂದ ಕೂಡಿದೆ ಎಂದು ರೈತ ವೀರಭದ್ರಪ್ಪ ಸಿದ್ದಪ್ಪ ಆರೋಪಿಸಿದ್ದಾರೆ.
ತಾಲೂಕಿನ ಗುರುಗುಂಟಾ ಹೋಬಳಿಯ ಹಿರೇಹೆಸರೂರು ಗ್ರಾಮದ ಸೀಮಾದ ಸರ್ವೆ ನಂ. 242 ಕ್ಷೇತ್ರ 4 ಎಕರೆ 14 ಗುಂಟೆ ಸ್ವಂತ ಜಮೀನಿನ ಪೈಕಿ 1.35 ಎಕರೆ ಜಮೀನಿನಲ್ಲಿ ಮೈಕೋ ಕಂಪನಿಯ ಲಾಟ್ ನಂ.ಬಿಕೆಡಿ 100037 ಬೆಂಡೆ ಬೀಜವನ್ನು ಲಿಂಗಸ್ಗೂರು ಪಟ್ಟಣದ ಶಿವಲೀಲಾ ಏಜೆನ್ಸೀಸ್ ಎಂಬ ಖಾಸಗಿ ಅಂಗಡಿಯಿಂದ ಖರೀದಿಸಿ ಬಿತ್ತನೆ ಮಾಡಲಾಗಿದೆ. ಗಿಡವೂ ಬೆಳೆದಿದೆ. ಆದರೆ ಬಿತ್ತನೆ ಮಾಡಿ ಸುಮಾರು 75 ದಿನ ಕಳೆದರೂ ಇಲ್ಲಿಯವರೆಗೆ ಯಾವುದೇ ಫಲ ನೀಡುತ್ತಿಲ್ಲ. ಇದರಿಂದ ನನಗೆ ನಷ್ಟವಾಗಿದ್ದು, ಖರೀದಿಸಿದ ಬೆಂಡೆ ಬೀಜ ಕಳಪೆಯಿಂದ ಕೂಡಿದ ಕುರಿತು ಶಂಕೆ ವ್ಯಕ್ತವಾಗುತ್ತಿದೆ.
ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಬೀಜದ ಕಂಪನಿಯಿಂದ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿ ಹಿರೇಹೆಸರೂರು ಗ್ರಾಮದ ರೈತ ವೀರಭದ್ರಪ್ಪ ತಂದೆ ಸಿದ್ದಪ್ಪ ಅವರು ತೋಟಗಾರಿಕೆ ಇಲಾಖೆ ಸಹಾಯಕ ನಿದೇಶಕರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಬಸನಗೌಡ, ಬಸವರಾಜ, ಶಂಭುಲಿಂಗಪ್ಪ ಇದ್ದರು.