ರೈತನಿಗೆ ಕೃಪೆ ತೋರಿದ ಮಳೆ
ಚಿತ್ತಾಪುರ: ಭೂಮಿ ಹದ ಮಾಡಿಕೊಂಡು ಮಳೆಗಾಗಿ ಎದುರುನೋಡುತ್ತಿದ್ದ ಅನ್ನದಾತನಿಗೆ ಕಳೆದ ಸೋಮವಾರ ರಾತ್ರಿ ಪೂರ್ತಿ ಬಂದ ಮಳೆ ತಡವಾಗಿಯಾದರೂ ಅವನ ಮೋಗದಲ್ಲಿ ನಗು ಮೂಡಿಸಿ ಹರ್ಷದ ಕಳೆ ಕಂಡು ಬರುತ್ತಿದೆ. ಎರಡೂ ವಾರ ಮಳೆ ಇಲ್ಲದೆ ರೈತನು ಮುಗಿಲು ನೋಡುತ್ತಾ ಚಿಂತೆಯಿಂದ ಮುಂಗಾರಿನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಅವನಿಗೆ ನಿರಾಶೆ ಮಾಡದೆ ಮಳೆ ಕೃಪೆ ತೋರಿದ್ದರಿಂದ ಅವನ ಚಟುವಟಿಕೆ ತೀವ್ರಗೊಂಡಿದೆ. ಬೇಸಿಗೆಯ 2 ತಿಂಗಳ ಪರ್ಯಾಂತ ಭೂಮಿಯನ್ನು ಹದ ಮಾಡಿ ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದ ರೈತನಿಗೆ ಕಾರ ಹುಣ್ಣಿಮೆಯಂದು ಮಳೆ ಬಂದಿರುವುದು ಖುಷಿ ಇಮ್ಮಡಿಗೊಳಿಸಿ, ಬೀಜ, ಗೊಬ್ಬರ ಖರೀದಿಗೆ ರೈತರು ಮುಂದಾಗಿ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ.
ಕೃಷಿ ಇಲಾಖೆಯ ಗುರಿ: ಈಗಾಗಲೇ ಕೃಷಿ ಇಲಾಖೆಯು ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ 72700 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಂಡಿದೆ. ತೊಗರಿ 55000 ಹೆಕ್ಟರ್, ಹೆಸರು 9000 ಹೆಕ್ಟರ್, ಉದ್ದು 10000 ಹೆಕ್ಟರ್, ಸಜ್ಜೆ 1700 ಹೆಕ್ಟರ್, ಶೇಂಗಾ 1000 ಹೆಕ್ಟರ್, ಸೂರ್ಯಕಾಂತಿ 1000 ಹೆಕ್ಟರ್ಗಳಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಕೆ. ಕನಕ ತಿಳಿಸಿದ್ದಾರೆ.