ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರೈತರಿಗೆ 7 ಸಾವಿರ ಕೋಟಿ ಸಾಲ: ಮಹದೇವ ಪ್ರಸಾದ್

Rashmi Kasaragodu
Updated On : 28 Jun 2013, 10:25 am

ರಾಯಚೂರು: ರೈತರಿಗೆ ಸಹಕಾರಿ ರಂಗದಿಂದ ಸಾಲ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವಂತಾಗಲು 7 ಸಾವಿರ ಕೋಟಿ ಸಾಲ ವಿತರಣೆಯ ಉದ್ದೇಶ ಹೊಂದಲಾಗಿದೆ. ಅದೇ ರೀತಿ ಯಶಸ್ವಿನಿ ವಿಮಾ ಯೋಜನೆಯನ್ನು ಮುಂದುವರಿಸಲಾಗುತ್ತದೆ ಎಂದು ಸಹಕಾರ ಖಾತೆ ಸಚಿವ ಮಹದೇವ ಪ್ರಸಾದ್ ತಿಳಿಸಿದರು.
ನಗರದಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ಸಹಕಾರಿ ಸಂಘಗಳ ಮೂಲಕ ರೈತರಿಗೆ 6 ಸಾವಿರ ಕೋಟಿ ಸಾಲ ವಿತರಣೆಯಾಗುತ್ತಿದ್ದು, ಈ ಪ್ರಮಾಣವನ್ನು 7 ಸಾವಿರ ಕೋಟಿಗೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಶೇ. 25ರಷ್ಟು ಹೊಸಬರಿಗೆ: ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ವಿತರಣೆ ಸರ್ಕಾರದ ಮೂಲ ಉದ್ದೇಶವಾಗಿದ್ದು, ಸಾಲ ವಿತರಣೆಯ ಮೊತ್ತದಲ್ಲಿ ಪ್ರತಿ ವರ್ಷ ಶೇ.25ರಷ್ಟು ಹೊಸಬರಿಗೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡಬೇಕೆಂಬುದು ನಿರ್ಧಾರವಾಗಿದೆ. ಈ ಮೂಲಕ ಸಹಕಾರಿ ಕ್ಷೇತ್ರದಿಂದ ಹೊರಗುಳಿದ ರೈತರಿಗೆ ನೆರವಾಗುವುದು ಸರ್ಕಾರದ ಆಶಯ ಎಂದರು.  ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ರೈತರ ಸಾಲ ಮನ್ನಾ ಮಾಡಿತು. ಆದರೆ ಅದಕ್ಕೆ ಅಗತ್ಯ ಅನುದಾನ ಒದಗಿಸದಿರುವುದು ಸಹಕಾರ ರಂಗದ ಸಂಸ್ಥೆಗಳಿಗೆ ಹೊರೆ ಹೆಚ್ಚಿಸಿದೆ ಎಂದ ಅವರು, ಸಾಲ ಮರುಪಾವತಿ ಅವಧಿಯನ್ನೂ ಜೂ.30ರ ಬದಲಿಗೆ ಜು. 30ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
1300 ಕೋಟಿ ಮೀಸಲಿಗೆ ಮನವಿ: ಬಿಜೆಪಿ ಘೋಷಿಸಿದ ಸಾಲ ಮನ್ನಾ ಕಾರ್ಯಕ್ರಮಕ್ಕೆ 800 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಜು.12ಕ್ಕೆ ಆರಂಭಗೊಳ್ಳುವ ಅಧಿವೇಶನದಲ್ಲಿ ಮಂಡಿಸುವ ಬಜೆಟ್ನಲ್ಲಿ 1,300 ಕೋಟಿಯನ್ನು ಸಾಲ ಮನ್ನಾ ಬಾಕಿ ಪಾವತಿಗೆ ಮೀಸಲಿಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಯಶಸ್ವಿನಿ ಯೋಜನೆ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಆ ಯೋಜನೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಯಶಸ್ವಿನಿ ಯೋಜನೆಯ ಲಾಭ ಸದ್ಯ 30 ಲಕ್ಷ ಜನರು ಪಡೆಯುತ್ತಿದ್ದು, 50 ಲಕ್ಷ ಜನಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ. ಎಸ್ಸಿ- ಎಸ್ಟಿ ಜನಾಂಗದವರ ವಿಮಾ ಕಂತಿನ ಮೊತ್ತವನ್ನು ಸರ್ಕಾರವೇ ಭರಿಸಲಿದೆ ಎಂದರು. ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಎಂಲ್ಸಿ ಮನೋಹರ ಮಸ್ಕಿ ಸೇರಿದಂತೆ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement