ಆರ್ಟಿಇ ಉಲ್ಲಂಘನೆ; ಶಾಲೆಗಳ ವಿರುದ್ಧ ಕ್ರಮ
ರಾಯಚೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಉಲ್ಲಂಘಿಸಿದ ಜಿಲ್ಲೆಯ ಮೂರು ಶಾಲೆಗಳ ವಿರುದ್ಧ ಜಿಪಂ ಕ್ರಮ ಕೈಗೊಂಡಿದ್ದು, ಒಂದು ಶಾಲೆಗೆ ಅನುದಾನ ರದ್ದುಗೊಳಿಸಿದರೆ, ಎರಡು ಶಾಲೆಗಳ ಮಾನ್ಯತೆ ರದ್ದುಪಡಿಸಿ ಜಿಪಂ ಸಿಇಒ ಆದೇಶ ಹೊರಡಿಸಿದ್ದಾರೆ.
ಜಿಪಂ ಸಿಇಒ ಜ್ಞಾನಪ್ರಕಾಶ್ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದು, ನಗರದ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯ ಅನುದಾನ ರದ್ದುಗೊಳಿಸಿದ್ದಾರೆ. ಅದೇ ವೇಳೆ ಕಾಯಿದೆ ಉಲ್ಲಂಘಿಸಿದ ಸಿಂಧನೂರಿನ ಡೆಫೋಡಿಲ್ ಮತ್ತು ದುದ್ದುಪುಡಿ ಶಾಲೆಗಳ ಮಾನ್ಯತೆ ರದ್ದುಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ಸರ್ಕಾರದ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯಂತೆ ಪ್ರವೇಶ ನೀಡಲು ನಿರಾಕರಿಸಿದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅವರು ಎಚ್ಚರಿಕೆಯ ನೋಟಿಸ್ ಜಾರಿ ಮಾಡಿದ್ದರು. ಆದರೆ ನೋಟಿಸ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ಲಕ್ಷ್ಯ ತೋರಿದ್ದರಿಂದ ಸದ್ಯ ಜಿಪಂ ಆಡಳಿತ ಮಾನ್ಯತೆ ಮತ್ತು ಅನುದಾನ ರದ್ದತಿಯ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.