ಕಾಲುವೆ ದುರಸ್ತಿ ಕಾಮಗಾರಿ ಕಳಪೆ ಆರೋಪ
ಕೆಂಭಾವಿ: ಸಮೀಪದಲ್ಲಿರುವ ಉಪ ಕಾಲುವೆ ಸಂಖ್ಯೆ 12ರ ದುರಸ್ತಿ ಕಾರ್ಯ ಪ್ರಾರಂಭವಾಗಿದ್ದು, ಅದು ಕಳಪೆ ಮಟ್ಟದಿಂದ ಕೂಡಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ. ಈ ಕುರಿತು ನಾರಾಯಣಪುರ ಕಾರ್ಯಪಾಲಕ ಅಭಿಯಂತರರವರಿಗೆ ಪತ್ರ ಬರೆದಿರುವ ಸಮಿತಿ, ಈಗ ಪ್ರಾರಂಭವಾಗಿರುವ ಕಾಲುವೆ ದುರಸ್ತಿ ಕಾಮಗಾರಿ ತೀವ್ರ ಕಳಪೆಯಿಂದ ಕೂಡಿದೆ. ಇದಕ್ಕೆ ಬಳಸುತ್ತಿರುವ ಮರಳು, ಸಿಮೆಂಟ್ ನಿಗದಿತ ಪ್ರಮಾಣದಲ್ಲಿ ಬಳಸದೆ ಕೆಲಸ ಮಾಡಲಾಗುತ್ತಿದೆ. ಕಾರಣ ಈ ಕುರಿತು ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕೆಂದು ಸಮಿತಿಯ ಕೆಂಭಾವಿ ಘಟಕದ ಸಂಚಾಲಕ ಮಾಳಪ್ಪ ರಾಜಾಪೂರ, ಪರಶುರಾಮ ಮಾಳಳ್ಳಿಕರ್, ಮರೆಪ್ಪ ಸಿನಪ್ಪಮನಿ, ಮಾದೇವಪ್ಪ ಬಸರಿಗಿಡ, ಪ್ರಕಾಶ ಮಾಳಳ್ಳಿಕರ ಒತ್ತಾಯಿಸಿದ್ದಾರೆ.