ಗುಟ್ಕಾ ನಿಷೇಧ: ದಾಳಿಗೆ ತಂಡ ರಚಿಸಲು ಸೂಚನೆ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.28
ತಂಬಾಕು ಹಾಗೂ ನಿಕೋಟಿನ್ ಘಟಕಾಂಶಗಳನ್ನು ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲಗಳ ಜಪ್ತಿಗಾಗಿ ಸಂಬಂಧಪಟ್ಟ ಇಲಾಖೆಗಳು ತಂಡಗಳನ್ನು ರಚಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ತಯಾರಿಕೆ, ಸಂಗ್ರಹಣೆ ಮತ್ತು ವಿತರಣೆ ನಿಷೇಧಿಸುವ ಅಂಗವಾಗಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಕಾಯ್ದೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಿತಿ ರಚಿಸಿಕೊಳ್ಳಿ: ಈಗಾಗಲೇ ಆರೋಗ್ಯ ನಿರೀಕ್ಷಕರು, ಆಹಾರ ನಿರೀಕ್ಷಕರು, ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ನಗರ ಮಟ್ಟದಲ್ಲಿ ರಚಿಸಲಾಗಿದೆ. ಅದರಂತೆ ತಾಲೂಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಘಟಕಾಂಶವುಳ್ಳ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗಳು ಸಮಿತಿಗಳನ್ನು ರಚಿಸಿಕೊಳ್ಳಬೇಕೆಂದು ಸೂಚಿಸಿದರು. ದಾಳಿ ಮಾಡುವ ಮುಂಚೆ ತಂಬಾಕು ಮತ್ತು ನಿಕೋಟಿನ್ ಘಟಕಾಂಶವುಳ್ಳ ಗುಟ್ಕಾ ಮತ್ತು ಪಾನ್ ಮಸಾಲಗಳ ಬಗ್ಗೆ ಅವಶ್ಯಕ ಮಾಹಿತಿ ಪಡೆಯಬೇಕು. ಕಾನೂನು ಬಾಹಿರವಾಗಿ ಇಂತಹ ಉತ್ಪನ್ನ ಮಾರಾಟ ಕಂಡು ಬಂದಲ್ಲಿ ಜಪ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಅದರಂತೆ ತಂಬಾಕು ಮತ್ತು ನಿಕೋಟಿನ್ಯುಕ್ತ ಆಹಾರ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಅವಶ್ಯಕ ಜಾಗೃತಿಯನ್ನು ಮೂಡಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮುಕ್ಕಾ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಸೂರ್ಯಪ್ರಕಾಶ ಇತರರು ಇದ್ದರು.
ಮಕ್ಕಳ ಕಳಕಳಿಗೆ ಡಿಸಿ ಶ್ಲಾಘನೆ
ಯಾದಗಿರಿ: ಉತ್ತರಾಖಂಡ ನೆರೆ ಹಾವಳಿಯಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗಾಗಿ ಪರಿಹಾರ ನಿಧಿ ಸಂಗ್ರಹಿಸುವುದರ ಮೂಲಕ ಮಕ್ಕಳು ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಸೈದಾಪುರದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ 10 ಸಾವಿರ ಮೌಲ್ಯದ ಡಿಡಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಮಾನವ ಧರ್ಮ. ಇಂಥ ಮನೋಭಾವನೆ ಎಲ್ಲರಲ್ಲೂ ಬೆಳೆದಾಗ ಮಾತ್ರ ಸಮಾನತೆ ಬರಲು ಸಾಧ್ಯ. ಮಕ್ಕಳು ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಜೇಗರ್, ದೇವಿಂದ್ರಪ್ಪ ನಾಯಕ, ದೇವಿಂದ್ರ ಕಲಾಲ, ಹಾಗೂ ಮುಖ್ಯಗುರು ರಾಘವೇಂದ್ರ ನಾಯಕ ಇತರರು ಇದ್ದರು.