ನಿಲ್ಲದ ಅಕ್ರಮ ಮರಳು ಸಾಗಾಟ, ಸಾರ್ವಜನಿಕರ ಆಕ್ರೋಶ
ಕನ್ನಡಪ್ರಭ ವಾರ್ತೆ ಸಿಂಧನೂರು ಜೂ.28
ನಗರದ ಹಿರೇಹಳ್ಳದಿಂದ ಅಕ್ರಮ ಮರಳು ಸಾಗಾಣಿಕೆ ಎಗ್ಗಿಲ್ಲದೆ ನಡೆದಿದ್ದು, ಸಾರ್ವಜನಿಕರ ವಿರೋಧದ ನಡುವೆಯೂ ಟ್ರ್ಯಾಕ್ಟರ್ ಮಾಲೀಕರು ತಮ್ಮ ದಂಧೆಯನ್ನು ರಾಜಾರೋಷವಾಗಿ ಮುಂದುವರೆಸಿದ್ದಾರೆ. ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅವರೊಂದಿಗೆ ಅನೈತಿಕ ಒಪ್ಪಂದ ಮಾಡಿಕೊಂಡು ಮರಳುಗಾರಿಕೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆಂದು ಕೋಟೆ ನಿವಾಸಿಗಳು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀನಿವಾಸ, ಬಾಷಾ ಎತ್ಮಾರಿ, ಶಿವಕುಮಾರ, ಹನುಮೇಶ, ಅಮರೇಶ, ಕಾಸಿಂಸಾಬ, ರಮೇಶ ಅವರು ಕೋಟೆ ಏರಿಯಾದ ಪಕ್ಕದಲ್ಲಿ ಹರಿಯುತ್ತಿರುವ ಹಿರೇಹಳ್ಳದಿಂದ ಮಧ್ಯರಾತ್ರಿಯಾಗುತ್ತಲೇ ಮರಳು ಸಾಗಾಟ ಪ್ರಕ್ರಿಯೆ ಶುರುವಿಟ್ಟುಕೊಳ್ಳುತ್ತಿದ್ದು, ಇದರಿಂದ ತಮಗೆ ನಿದ್ದೆ ಮಾಡುವುದೇ ಸಾಧ್ಯವಾಗುತ್ತಿಲ್ಲ. ಸುಮಾರು 12 ರಿಂದ 15 ಟ್ರ್ಯಾಕ್ಟರ್ಗಳು ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆವರೆಗೆ ಉಸುಕನ್ನು ಸಾಗಿಸುತ್ತವೆ. ಪ್ರತಿ ಕ್ರ್ಯಾಕ್ಟರ್ 10 ರಿಂದ 15 ಟ್ರಿಪ್ ಉಸುಕನ್ನು ಹಳ್ಳದಿಂದ ನಿರಂತರವಾಗಿ ಕೋಟೆ ವೀರಣ್ಣ ದೇವಸ್ಥಾನ, ವೀರಶೈವ ರುದ್ರಭೂಮಿ ಹಾಗೂ ಸುಕಾಲಪೇಟೆಯ ಮಾರ್ಗಗಳ ಮೂಲಕ ಹೊತ್ತೊಯ್ಯುತ್ತವೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೆ ಮರಳು ಸಾಗಾಟ ತಮಗೆ ಸಂಬಂಧಪಟ್ಟಿದ್ದಲ್ಲ. ಲೋಕೋಪಯೋಗಿ ಅಧಿಕಾರಿ ಬಳಿ ಹೋಗಿ ಎಂದು ಹೇಳುತ್ತಿದ್ದಾರೆ. ಆದರೆ ಲೋಕೋಪಯೋಗಿ ಅಧಿಕಾರಿಗಳಿಗೆ ದೂರಿತ್ತರೆ ಸರಿಯಾಗಿ ಸ್ಪಂದಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ದಂಧೆಕೋರರ ಬಗೆಗೆ ಮೌನ ತಾಳುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಅವರು ಜನಪ್ರತಿನಿಧಿಗಳಾದರೂ ಈ ಬಗ್ಗೆ ಗಮನಹರಿಸಿ ಮರಳುಗಾರಿಕೆಗೆ ಅವಕಾಶ ನೀಡಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಕ್ರಮಕ್ಕೆ ಕಡಿವಾಣ ಹಾಕಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿದಿದ್ದರೆ ಇಲಾಖೆಯ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.