ಬುಲೆಟ್ ಪಾಯಿಂಟ್ನಲ್ಲಿ ಸಾರಾಂಶ ಸಂಗ್ರಹಿಸಲು ಅಧಿಕಾರಿಗಳ ನೇಮಕ
ಬುಲೆಟ್ ಪಾಯಿಂಟ್ನಲ್ಲಿ ಸಾರಾಂಶ ಸಂಗ್ರಹಿಸಲು ಅಧಿಕಾರಿಗಳ ನೇಮಕ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.28
ಜುಲೈ 1ರ ಬೆಳಗ್ಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸಂಬಂಧಪಟ್ಟಂತೆ ಭಾರತ ಸಂವಿಧಾನ 371ಜೆ ತಿದ್ದುಪಡಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ರಚಿಸಲಾದ ಸಚಿವ ಸಂಪುಟದ ಉಪಸಮಿತಿಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೀಡುವ ಅಹವಾಲುಗಳನ್ನು ಹಾಗೂ ಅಭಿಪ್ರಾಯಗಳನ್ನು ಮತ್ತು ಅದರ ಸಾರಾಂಶವನ್ನು ಬುಲೆಟ್ ಪಾಯಿಂಟ್ಗಳ ಮಾದರಿಯಲ್ಲಿ ತಯಾರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಹಾಗೂ ಎಪಿಎಂಸಿ ಕಾರ್ಯದರ್ಶಿ ಚಂದ್ರಮೋಹನ್ ಅವರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ತಮ್ಮ ಅಹವಾಲುಗಳನ್ನು ಮನವಿಗಳನ್ನು ಗುಲ್ಬರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಯೋಜನಾ ನಿರ್ದೇಶಕ ಮೊಹಮ್ಮದ್ ಇಲಿಯಾಸ್ ಅವರಿಗೆ ತಲುಪಿಸಲು ಕೋರಲಾಗಿದೆ.
ಉಪ ಸಮಿತಿಯ ಮುಂದೆ ಸಂಘ ಸಂಸ್ಥೆಗಳು ತಮ್ಮ ಅಹವಾಲುಗಳನ್ನು ಸಾದರಪಡಿಸಲು ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಸಂಬಂಧಿಸಿದವರು ಮುಂಗಡವಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಪ್ರವೇಶಕ್ಕಾಗಿ ಪಾಸುಗಳನ್ನು ಪಡೆಯುವಂತೆ ಕೋರಲಾಗಿದೆ. ಸಂಘ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಲು ಕಾಲಾವಕಾಶವನ್ನು ನೀಡಲಾಗಿದೆ.
ಉಪ ಸಮಿತಿಯು ಜುಲೈ 1ರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಬೀದರ್ ಜಿಲ್ಲೆಗೆ ಸಂಬಂಧಿಸಿದಂತೆ ಹಾಗೂ ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ಗಂಟೆವರೆಗೆ ಯಾದಗಿರಿ ಜಿಲ್ಲೆಗೆ ಹಾಗೂ ಮಧ್ಯಾಹ್ನ 3ರಿಂದ 5 ರವರೆಗೆ ಗುಲ್ಬರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಸ್ವೀಕರಿಸಲಿದೆ.
ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಅಹವಾಲುಗಳನ್ನು ಸ್ವೀಕರಿಸಲು ಅಲ್ಲಿನ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿರುತ್ತಾರೆ.
ಆದ್ದರಿಂದ ಅಹವಾಲು ಸಲ್ಲಿಸುವ ಸಂಘ ಸಂಸ್ಥೆಗಳು ಹಾಗೂ ಆಸಕ್ತರು ಗುಲ್ಬರ್ಗ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿರುವ ಯೋಜನಾ ನಿರ್ದೇಶಕರ ಶಾಖೆಯನ್ನು ಸಂಪರ್ಕಿಸಿ ಕೂಡಲೇ ತಮ್ಮ ಅಹವಾಲುಗಳನ್ನು ಸಲ್ಲಿಸಿ ಪಡೆಯುವ ಮನವಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.