ರೇಷನ್ ಕಾರ್ಡ್ಗೆ ನೂಕುನುಗ್ಗಲು
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಜೂ.28
ಸರ್ಕಾರದ ಜನಪ್ರೀಯ ಯೋಜನೆಗಳಲ್ಲೊಂದಾದ ಪಡಿತರ ಕಾರ್ಡ್ ಪಡೆಯಲು ಮಹಿಳೆಯರು ಸೇರಿದಂತೆ ಜನರು ಆಹಾರ ಇಲಾಖೆ ಕಚೇರಿಗೆ ಮುಗಿಬಿದ್ದ ಪರಿಣಾಮ ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ.
ಸರ್ಕಾರ ಕಳೆದ ಐದಾರು ವರ್ಷಗಳ ಹಿಂದೆ ಕೋಮ್ಯಾಟ್ ಎಂಬ ಖಾಸಗಿ ಕಂಪನಿಗೆ ಪಡಿತರ ಚೀಟಿ ವಿತರಿಸಲು ಗುತ್ತಿಗೆ ನೀಡಲಾಗಿತ್ತು. ಜನರಿಂದ ಸೂಕ್ತ ದಾಖಲೆಗಳನ್ನು ಪಡೆದು ಪಡಿತರ ಚೀಟಿ ವಿತರಣೆ ಮಾಡಿತ್ತು. ಆದರೆ ಆ ಸಮಯದಲ್ಲಿ ಫಲಾನುಭವಿಗಳ ಹೆಬ್ಬೆಟ್ಟಿನ ಗುರುತು ಹಾಕದೆ ವಿತರಣೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ದಿನವಿಡೂ ಸರದಿ ಸಾಲು: ಪ್ರಸ್ತುತ ಸರ್ಕಾರ ಈಗಾಗಲೇ ಪಡಿತರ ಚೀಟಿ ಪಡೆದ ಫಲಾನುಭವಿಗಳನ್ನು ಹಾಗೂ ಹೊಸದಾಗಿ ಚೀಟಿ ಪಡೆಯುವವರಿಗೆ ಬಯೋವುಟ್ರಿಕ್ ವ್ಯವಸ್ಥೆಯಡಿ ತರುವ ಉದ್ದೇಶದಿಂದ ಭಾವಚಿತ್ರ ಮತ್ತು ಹೆಬ್ಬೆಟ್ಟಿನ ಗುರುತು ಪಡೆಯುವಂತೆ ಸೂಚನೆ ನೀಡಿದ ಪರಿಣಾಮ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರೂ ಸೇರಿದಂತೆ ಜನತೆ ಆಹಾರ ಇಲಾಖೆ ಕಚೇರಿ ಮುಂದೆ ದಿನವಿಡೀ ಸಾಲುಗಟ್ಟಿ ನಿಂತು ಹೆಬ್ಬೆಟ್ಟಿನ ಗುರುತು ಹಾಕಲು ಮತ್ತು ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಹಾಕಲು ಆಗಮಿಸಿ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ.
ಸಿಎಂ ಘೋಷಣೆ ಕಾರಣ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಬಡವರಿಗೆ ಪ್ರತಿ ಕೆಜಿಗೆ 1ರಂತೆ 30 ಕೆಜಿ ಅಕ್ಕಿ ವಿತರಿಸುವ ಘೋಷಣೆ ಮಾಡಿದ್ದು ಅಲ್ಲದೆ ಜು.1ರಿಂದ ಜಾರಿಗೆ ಬರಲಿದೆ ಎಂಬ ಸುದ್ದಿ ತಿಳಿದ ಪಡಿತರ ಕಾರ್ಡುದಾರರಲ್ಲಿ ಸಂತಸ ಮೂಡಿಸಿದೆ. ಆದರೆ ಬಯೋವುಟ್ರಿಕ್ ಸಹಿತ ಬಿಪಿಎಲ್ ಕಾರ್ಡ್ ಪಡೆಯುವ ಆತುರದಲ್ಲಿ ಭಾವಚಿತ್ರ ಮತ್ತು ಹೆಬ್ಬೆಟ್ಟಿನ ಗುರುತು ನೀಡಲು ಜನರು ಕಚೇರಿಗೆ ಮುಗಿಬಿದ್ದಿದ್ದಾರೆ.
ನೂಕುನುಗ್ಗಲು- ಸಿಬ್ಬಂದಿ ಪರದಾಟ: ಆದರೆ, ತಾಲೂಕಿನಲ್ಲಿ ಸಾವಿರಾರು ಜನ ಫಲಾನುಭವಿಗಳಿದ್ದು, ದಿನನಿತ್ಯ ನೂರಾರು ಜನ ಆಹಾರ ಇಲಾಖೆ ಕಚೇರಿಗೆ ಮುಗಿಬಿದ್ದು ಪಡೆಯಲು ಆಗಮಿಸುತ್ತಿದ್ದಾರೆ. ಆದರೆ ಕಚೇರಿಯಲ್ಲಿ ಮಾತ್ರ ಕೇವಲ ಎರಡು ಕಂಪ್ಯೂಟರ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಆನ್ಲೈನ್ ಮೂಲಕ ಅಪ್ಲೋಡ್ ಮಾಡಲು ನೆಟ್ವರ್ಕ್ ಸಮಸ್ಯೆಯಿಂದ ಸಿಬ್ಬಂದಿ ಪರದಾಡುವಂತಾಗಿದೆ. ಇದರಿಂದ ಜನರ ಆಕ್ರೋಶ, ಮತ್ತೊಂದೆಡೆ ನೂಕುನುಗ್ಗಲು ಉಂಟಾಗುತ್ತಿದ್ದು, ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಹೆಚ್ಚುವರಿ ಕೇಂದ್ರ ತೆರೆಯಲು ಆಗ್ರಹ: ಸರ್ಕಾರದ ಆದೇಶದಂತೆ ಬಯೋವುಟ್ರಿಕ್ ಸಹಿತ ಬಿಪಿಎಲ್ ಕಾರ್ಡುಗಳನ್ನು ಸುಗಮವಾಗಿ ಜನರು ಪಡೆಯಲು ಸಂಬಂಧಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಿ ಹೆಚ್ಚುವರಿಯಾಗಿ ಕಂಪ್ಯೂಟರ್ ಕೇಂದ್ರಗಳನ್ನು ತೆಗೆಯಬೇಕೆಂಬುದು ಫಲಾನುಭವಿಗಳ ಒತ್ತಾಯ.