ಸರ್ಕಾರಿ ಭೂ ಅತಿಕ್ರಮಣ: 'ಹೈ'ನಲ್ಲಿ ದಾವೆ- ಕುಷ್ಟಗಿ
ರಾಯಚೂರು: ರಾಜ್ಯದಲ್ಲಿ 12 ಲಕ್ಷ ಎಕರೆ ಸಾರ್ವಜನಿಕ ಕೆರೆ ಕುಂಟೆಗಳು, ಗೋಮಾಳ, ಅರಣ್ಯ ಜಮೀನು ಅತಿಕ್ರಮಣವಾಗಿದ್ದು, ಈ ಬಗ್ಗೆ ಜನಸಂಗ್ರಾಮ ಪರಿಷತ್ ಹೈಕೋರ್ಟ್ಗೆ ದೂರು ಸಲ್ಲಿಸಿದೆ ಎಂದು ಜನಸಂಗ್ರಾಮ ಪರಿಷತ್ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮೀನು ಅತಿಕ್ರಮಣ ಅಧ್ಯಯನ ಸಮಿತಿಯು ರಾಜ್ಯದಲ್ಲಿ 12 ಲಕ್ಷ ಎಕರೆ ಸರ್ಕಾರಿ ಜಮೀನು ಅತಿಕ್ರಮಣವಾಗಿದೆ ಎಂದು ವರದಿ ಸಲ್ಲಿಸಿದ್ದು, ಆ ವರದಿಯಾಧರಿಸಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜ ಪರಿವರ್ತನಾ ಜನಾಂದೋಲನದ ವತಿಯಿಂದ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಲು ಮುಂದಾದಾಗ ಸುಪ್ರೀಂಕೋರ್ಟ್ ಈ ಕುರಿತು ಹೈಕೋರ್ಟ್ನಲ್ಲಿ ದಾವೆ ಹೂಡಲು ಸಲಹೆ ನೀಡಿದೆ ಎಂದು ತಿಳಿಸಿದರು.
ನೋಟಿಸ್ ಜಾರಿ: ಸುಪ್ರೀಂಕೋರ್ಟಿನ ಸೂಚನೆ ಹಿನ್ನೆಲೆ ರಾಜ್ಯ ಹೈಕೋರ್ಟ್ನಲ್ಲಿ ಇತ್ತೀಚೆಗೆ ಸಂಘಟನೆಯಿಂದ ಪ್ರಕರಣ ದಾಖಲಿಸಿದ್ದು, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಹೈಕೋರ್ಟ್ ಪ್ರಕರಣವನ್ನು ತುರ್ತಾಗಿ ಕೈಗೆತ್ತಿಕೊಂಡಿದೆ. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದರು.
ವಿದೇಶಾಂಗ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ, ಮಾಜಿ ಸ್ಪೀಕರ್ ರಮೇಶಕುಮಾರ್ ಅವರೂ ಸೇರಿ ಅನೇಕ ರಾಜಕೀಯ ನಾಯಕರು ಸರ್ಕಾರಿ ಜಮೀನು ಅತಿಕ್ರಮಣ ಮಾಡಿಕೊಂಡಿದ್ದಾರೆಂದು ತಿಳಿಸಿದ ಅವರು, ಜಮೀನು ಮಂಜೂರಾತಿ ಸಮಿತಿಯ ಮೂಲಕ ಎಲ್ಲ ಪಕ್ಷಗಳ ಪ್ರಮುಖರು ಅರಣ್ಯ ಜಮೀನು ಮಂಜೂರು ಮಾಡಿಸಿಕೊಳ್ಳುವ ಮೂಲಕ ಅಕ್ರಮದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿದರು.