ಅಳಿವಿನ ಅಂಚಲ್ಲಿ ತಿಮ್ಮಾಪುರ ಐತಿಹಾಸಿಕ ದೊಡ್ಡಬಾವಿ
ಸುರಪುರ: ಒಂದು ಕಾಲದಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತಿದ್ದ ಐತಿಹಾಸಿಕ ಪ್ರಸಿದ್ಧ ಹಾಗೂ ಪವಿತ್ರ ಎಂದು ನಂಬಿದ್ದ ತಿಮ್ಮಾಪುರದ ದೊಡ್ಡಬಾವಿ ಇಂದು ಅವಸಾನದ ಅಂಚಿನಲ್ಲಿದೆ. ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಾವಿಗೆ ರಕ್ಷಣೆ ಇಲ್ಲದಂತಾಗಿದೆ.ರಂಗಂ ಪೇಟ-ತಿಮ್ಮಾಪುರದ ಮಧ್ಯ ಭಾಗದಲ್ಲಿರುವ ಈ ಬಾವಿಗೆ ದೊಡ್ಡ ದೊಡ್ಡ ಕಲ್ಲಿನಿಂದ ನಾಲ್ಕು ದಿಕ್ಕುಗಳಿಂದ ನೂರಾರು ಮೆಟ್ಟಿಲುಗಳನ್ನು ಅಚ್ಚುಕಟ್ಟಾಗಿ ಕಟ್ಟಿಸಿದ್ದು, ಸುರಪುರ ಸಂಸ್ಥಾನದಲ್ಲಿ ಮಂತ್ರಿಯಾಗಿದ್ದ ನಿಷ್ಠಿ ವೀರಪ್ಪನವರು. ದೊಡ್ಡಬಾವಿ ಎಂಬ ಹೆಸರೇ ಸೂಚಿಸುವಂತೆ ಅತ್ಯಂತ ವಿಶಾಲವಾದ ಸುತ್ತಳತೆ ಹೊಂದಿದೆ. ಸುಮಾರು 300 ಅಡಿ ಸುತ್ತಳತೆ ಹೊಂದಿರುವ ಈ ಬಾವಿ ಚೌಕಾಕರವಾಗಿದ್ದು ಸುಂದರ ಹಾಗೂ ಕಲಾತ್ಮಕವಾಗಿ ಕಾಣುತ್ತದೆ. ದಿವ್ಯ ಔಷಧಿ: ಬಾವಿಯ ನಾಲ್ಕು ದಿಕ್ಕುಗಳಿಂದ ಕಲಾತ್ಮಕತೆಯಿಂದ ನಾಲ್ಕು ಕಡೆ ದ್ವಾರಗಳನ್ನು ನಿರ್ಮಿಸಲಾಗಿದೆ. ಬಾವಿಯ ಒಳಗಡೆ ಸುತ್ತಲೂ ಮನೆಗಳ ಆಕಾರದಂತೆ ಕಮಾನುಗಳಿದ್ದು, ಇವು ಆಕರ್ಷಕವಾಗಿದೆ. ಈ ಬಾವಿಯ ನೀರು ಹಿಂದೆ ಕೆಲ ರೋಗಿಗಳಿಗೆ ದಿವ್ಯ ಔಷಧಿಯಾಗಿದ್ದರಿಂದ ಕಮಾನುಗಳಲ್ಲಿ 7 ದಿನಗಳವರೆಗೆ ವಸತಿಗಾಗಿ ಬಳಸಿಕೊಳ್ಳುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.
ಜಾಲಿ ಗಿಡ: ಐತಿಹಾಸಿಕ ದೊಡ್ಡಬಾವಿಯ ಮೆಟ್ಟಿಲುಗಳು ಕಮಾನುಗಳು ಕುಸಿದು ಬೀಳುತ್ತಿವೆ. ಬಾವಿಯ ಒಳಗಡೆ ಜಾಲಿಗಿಡಗಳು ಬೆಳೆದು ನಿಂತಿವೆ. ಬಾವಿಯ ನೀರು ಸಂಪೂರ್ಣ ಪಾಚಿಗಟ್ಟಿದೆ. ಬಾವಿಯ ಮೇಲ್ಭಾಗದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಗಬ್ಬು ವಾಸನೆಯಿಂದ ಹತ್ತಿರದ ಮನೆಗಳಲ್ಲಿ ವಾಸವಾಗಿರುವವರಿಗೆ ಸಾಕಷ್ಟು ತೊಂದರೆಯಾಗಿದೆ. ಪಟ್ಟಣಕ್ಕೆ ನೀರು ಒದಗಿಸುತ್ತಿದ್ದ ಬಾವಿಯೇ ಈಗ ರಕ್ಷಣೆಗೆ ಮೊರೆ ಇಡುತ್ತಿದೆ. ಪಟ್ಟಣದಲ್ಲಿ ಪ್ರತಿ ಬೇಸಿಗೆಯಲ್ಲೂ ಕುಡಿನ ನೀರಿನ ಅಭಾವ ಕಂಡುಬರುತ್ತಿದ್ದರೂ, ಇರುವ ಬಾವಿಯ ರಕ್ಷಣೆಗೆ ಯಾರೂ ಮುಂದಾಗದಿರುವುದು ವಿಷಾದನೀಯ ಸಂಗತಿ.
ನೀರಿನ ಆಸರೆ: ಹಿಂದೆ ತಿಮ್ಮಾಪುರದ ಸಮಸ್ತ ನಾಗರಿಕರಿಗೆ ಈ ಬಾವಿಯ ನೀರು ಆಸರೆಯಾಗಿತ್ತು. ಕೊಳವೆ ಬಾವಿ, ನದಿಯ ನೀರು ಪೂರೈಕೆ ಪ್ರಾರಂಭಿಸಿದಾಗ ಕ್ರಮೇಣ ನಾಗರಿಕರು ಬಾವಿ ನೀರು ತರುವುದು ಕಡಿಮೆಯಾಗುತ್ತಿದ್ದಂತೆ ಬಾವಿಯಲ್ಲಿ ಕಸ-ಕಡ್ಡಿ ಹಾಕುವುದು, ಬಟ್ಟೆ ತೊಳೆಯುವುದು ಸರ್ವೇ ಸಾಮಾನ್ಯವಾಗಿದೆ.ಸುರಪುರ ಪಟ್ಟಣದಲ್ಲಿ ಮಳೆಗಾಲ-ಚಳಿಗಾಲದಲ್ಲಿ ನೀರಿಗೆ ಬರ ಆವರಿಸುತ್ತದೆ. ಇದರಿಂದ ನಾಗರಿಕರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ತಲೆದೋರುವ ಸಂದರ್ಭವಿದೆ. ಬೇಸಿಗೆಯಲ್ಲಿ ನೀರಿನ ಬವಣೆ ಹೇಗೆ ಎದುರಿಸಬೇಕೆಂಬ ಚಿಂತೆ ಜನತೆಯನ್ನು ಕಾಡುತ್ತದೆ. ಇತಿಹಾಸದ ಕುರುಹಾಗಿರುವ ದೊಡ್ಡಬಾವಿಯನ್ನು ಸ್ವಚ್ಛಗೊಳಿಸಿ, ಸುತ್ತ-ಮುತ್ತ ಬೀಳುತ್ತಿರುವ ಗೋಡೆಗಳನ್ನು ಕಟ್ಟಿಸಬೇಕು. ಕಸ-ಕಡ್ಡಿ, ಬಟ್ಟೆ ಒಗೆಯುವುದನ್ನು ತಡೆಗಟ್ಟಲು ಅರಿವು ಮೂಡಿಸಬೇಕಾಗಿರುವುದು ಪುರಸಭೆಯವರ ಆದ್ಯ ಕರ್ತವ್ಯವಾಗಿದೆ. ಬೇಸಿಗೆಯಲ್ಲಿ ಪಂಪ್ ಹಚ್ಚಿ, ಪೈಪ್ಲೈನ್ ಅಳವಡಿಸಿದಲ್ಲಿ ನಾಗರಿಕರಿಗೆ ಅನುಕೂಲವಾಗುತ್ತದೆ.