ದುದ್ದುಪೂಡಿ: ಉತ್ತಮ ಫಲಿತಾಂಶ
ಸಿಂಧನೂರು: ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಬಿ.ಎಸ್ಸಿ ಮತ್ತು ಬಿ.ಕಾಂ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ದುದ್ದುಪೂಡಿ ಮಹಿಳಾ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದೆ ಎಂದು ಕಾಲೇಜಿನ ಕಾರ್ಯದರ್ಶಿ ಆರ್.ಸಿ.ಪಾಟೀಲ ತಿಳಿಸಿದ್ದಾರೆ. ಬಿ.ಎಸ್ಸಿ. ಅಂತಿಮ ವರ್ಷದ 25 ವಿದ್ಯಾರ್ಥಿನಿಯರಲ್ಲಿ 19 ವಿದ್ಯಾರ್ಥಿನಿಯರು ಉನ್ನತ ಶ್ರೇಣಿ, 6 ಜನ ಪ್ರಥಮ ಶ್ರೇಣಿ, ಬಿ.ಕಾಂ. ಅಂತಿಮ ವರ್ಷದ 32 ವಿದ್ಯಾರ್ಥಿನಿಯರಲ್ಲಿ 11 ಜನ ಡಿಸ್ಟಿಂಕ್ಷನ್, 19 ಜನ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಬಿ.ಎಸ್ಸಿ. ವಿಭಾಗದಲ್ಲಿ ಮಮತ ಕೆ ಶೇ.92, ಮೋನಿಕಾ ಸಿಂಹಾದ್ರಿ ಶೇ.91, ರಶ್ಮಿತಾ ವೈ ಶೇ.90.40, ಹರಿತ ಜಿ ಶೇ.90 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹರಿತಾ ಜಿ. ಗಣಿತ ವಿಷಯದಲ್ಲಿ 300/300, 4 ವಿದ್ಯಾರ್ಥಿನಿಯರು ಗಣಿತದಲ್ಲಿ 299/300 ಅಂಕಗಳನ್ನು ಪಡೆದು ಕಾಲೇಜಿಗೆ ಉತ್ತಮ ಸಾಧನೆ ಮಾಡಿದ್ದಾಳೆ. ಆಡಳಿತ ಮಂಡಳಿಯವರು ಅವರನ್ನು ಅಭಿನಂದಿಸಿದ್ದಾರೆ.
ವಿವೇಕಾನಂದ ರಥಯಾತ್ರೆ ಸಭೆ
ಸಿಂಧನೂರು: ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಕರ್ನಾಟಕ ಶಾಖೆಗಳು ಹಾಗೂ ರಾಮಕೃಷ್ಣ ಭಾವಪ್ರಚಾರ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಜುಲೈ 16ರಂದು ನಗರದ ಪ್ರಮುಖ ಬೀದಿಗಳಲ್ಲಿ ವಿವೇಕಾನಂದರ ರಥಯಾತ್ರೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಜೂ.30 ಬೆಳಿಗ್ಗೆ 10ಕ್ಕೆ ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವದ ಅಂಗವಾಗಿ ವಿವೇಕಾನಂದರ ರಥಯಾತ್ರೆಯ ಅಂಗವಾಗಿ ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಅಭಿಮಾನಿಗಳು ಹಾಗೂ ಎಲ್ಲ ಸಮಾಜದ, ಮುಖಂಡರು ಭಾಗವಹಿಸಬೇಕೆಂದು ಇರೇಶ ಇಲ್ಲೂರು ಮತ್ತಿತರರು ತಿಳಿಸಿದ್ದಾರೆ.