ಬಿಎಸ್ವೈ ವಾಪಸು; ಬಿಜೆಪಿಯಲ್ಲಿ ತ್ರಾಸು
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ. 29
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರಳಿ ಬಿಜೆಪಿಗೆ ಬರುವ ವಿಚಾರ ಇದೀಗ ಅವರ ಅಂಗಳದಲ್ಲೇ ಬಂದು ಬಿದ್ದಿದೆ.
ನಾನು ಬಿಜೆಪಿಗೆ ಮರಳಬೇಕು ಎಂಬ ವಿಚಾರ ಮೊದಲು ಆ ಪಕ್ಷದಲ್ಲಿ ತೀರ್ಮಾನವಾಗಲಿ ಎಂದು ಯಡಿಯೂರಪ್ಪ ಅವರು ಹೇಳುತ್ತಿದ್ದರೆ, ಅವರು ಪಕ್ಷಕ್ಕೆ ಬರಬೇಕಾದರೆ ಮೊದಲು ಅರ್ಜಿ ಹಾಕಲಿ ಎಂದು ಬಿಜೆಪಿ ಪಟ್ಟುಹಿಡಿದು ಕುಳಿತಿದೆ.
ಈ ಮಧ್ಯೆ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ವಿಷಯದಲ್ಲಿ ಬಿಜೆಪಿ ಎರಡು ಬಣಗಳಾಗಿವೆ. ಒಂದು ಗುಂಪು ಯಡಿಯೂರಪ್ಪ ಅವರನ್ನು ಕರೆತರಬೇಕು ಎಂದು ಹೇಳುತ್ತಿದ್ದರೆ, ಇನ್ನೊಂದು ಗುಂಪು ಅವರಾಗಿಯೇ ಬರಲಿ. ನಾವಾಗಿ ಕರೆಯುವುದು ಬೇಡ ಎಂದು ಹೇಳುತ್ತಿದೆ.ಹೀಗಾಗಿ ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಬಗ್ಗೆ ಶನಿವಾರ ಪಕ್ಷದ ರಾಜ್ಯ ಉಸ್ತುವಾರಿ ಥಾವರ್ಚಂದ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಆದರೆ, ಯಡಿಯೂರಪ್ಪ ಅವರ ಪರವಾಗಿ ಆ ಪಕ್ಷದ ಇತರೆ ಮುಖಂಡರು ಪ್ರಸ್ತಾಪ ಸಲ್ಲಿಸಿದರೂ ಅದನ್ನು ಪರಿಶೀಲಿಸುವ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಆಗಿದ್ದೇನು?: ಈ ಹಿಂದೆ ನಡೆದ ಚರ್ಚೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಗೆಹ್ಲೋಟ್ ಅವರ ಮುಂದೆ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸಂಸದ ಅನಂತಕುಮಾರ್, ಇದುವರೆಗೆ ಬಿಜೆಪಿ ತೊರೆದವರನ್ನು ಪಕ್ಷವೇ ಕರೆದು ಸೇರಿಸಿಕೊಂಡ ಉದಾಹರಣೆ ಇಲ್ಲ. ಆದರೆ, ಅಂಥವರು ಮತ್ತೆ ಪಕ್ಷಕ್ಕೆ ಸೇರಲು ಮುಂದಾದಾಗ ಅದನ್ನು ತಿರಸ್ಕರಿಸಿಯೂ ಇಲ್ಲ. ಯಡಿಯೂರಪ್ಪ ಅವರು ಪಕ್ಷ ಸೇರಲು ಯಾರ ವಿರೋಧವೂ ಇಲ್ಲ. ಹಾಗೆಂದು ನಾವಾಗಿಯೇ ಅವರನ್ನು ಆಹ್ವಾನಿಸಿ ಹೊಸ ಸಂಪ್ರದಾಯ ಸೃಷ್ಟಿಸುವುದು ಬೇಡ. ಅವರಾಗಿಯೇ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದರೆ ಅದರಂತೆ ಮುಂದುವರಿಯೋಣ ಎಂದು ಸಲಹೆ ನೀಡಿದರು ಎನ್ನಲಾಗಿದೆ.ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು, ಈ ಹಿಂದೆ ನಡೆದ ಕೆಲವು ಸಭೆಗಳಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಪ್ರಸ್ತಾಪವನ್ನು ನಾವು ಮುಂದಿಟ್ಟಿದ್ದೇವೆ. ಬಹುತೇಕ ಶಾಸಕರು, ಸಂಸದರ ಅಭಿಪ್ರಾಯವೂ ಇದೇ ಆಗಿದೆ. ಹೀಗಾಗಿ ಮತ್ತೊಮ್ಮೆ ಅವರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳೋಣ ಎಂದು ಹೇಳಿದರು.
ಅಂತಿಮವಾಗಿ ಮಾತನಾಡಿದ ಥಾವರ್ಚಂದ್ ಗೆಹ್ಲೋಟ್, ಈ ಹಿಂದೆ ಪಕ್ಷ ತೊರೆದವರು ಮತ್ತೆ ಅವರಾಗಿಯೇ ಪಕ್ಷಕ್ಕೆ ಸೇರಿಕೊಂಡರು. ಯಡಿಯೂರಪ್ಪ ಅವರ ವಿಚಾರದಲ್ಲೂ ನಾವಾಗಿ ಅವರನ್ನು ಪಕ್ಷದಿಂದ ಹೊರಹಾಕಿಲ್ಲ. ಉಳಿಸಿಕೊಳ್ಳುವ ಬಗ್ಗೆಯೇ ಸಾಕಷ್ಟು ಪ್ರಯತ್ನ ಮಾಡಿದೆವು. ಅದರ ಹೊರತಾಗಿಯೂ ಯಡಿಯೂರಪ್ಪ ಅವರೇ ಪಕ್ಷ ಬಿಟ್ಟು ಹೋದರು. ಹೀಗಾಗಿ ಮತ್ತೆ ನಾವಾಗಿ ಆಹ್ವಾನಿಸುವುದು ಸೂಕ್ತವಲ್ಲ. ಏಕೆಂದರೆ, ಇದರಿಂದ ರಾಷ್ಟ್ರಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಕುಂದುಂಟಾಗಬಹುದು. ಹೀಗಾಗಿ ಮೊದಲು ಅವರ ಕಡೆಯಿಂದಲೇ ಕ್ರಿಯೆ ಆರಂಭವಾಗಲಿ. ನಂತರ ನಾವು ಪ್ರತಿಕ್ರಿಯಿಸೋಣ ಎಂದು ಸ್ಪಷ್ಟಪಡಿಸಿ ಈ ವಿಚಾರಕ್ಕೆ ತೆರೆ ಎಳೆದರು ಎಂದು ಮೂಲಗಳು ಹೇಳಿವೆ.
ಪಕ್ಷ ಸಂಘಟನೆ ಕುರಿತಂತೆ ಸಮಾಲೋಚನೆ: ಈ ಮಧ್ಯೆ ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಬಲಪಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಪಕ್ಷದ ಆಂತರಿಕ ಚುನಾವಣೆಯಲ್ಲಿ ಒಳ್ಳೆಯ ತಂಡವನ್ನು ಆಯ್ಕೆ ಮಾಡಿ ಆ ಮೂಲಕ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧವಾಗುವಂತೆ ಗೆಹ್ಲೋಟ್ ಅವರು ರಾಜ್ಯ ಮುಖಂಡರಿಗೆ ಸಲಹೆ ಮಾಡಿದರು.ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ ಮತ್ತಿತರರು ಹಾಜರಿದ್ದರು.
'ಕರೆ ತರುವ ಪ್ರಸ್ತಾಪ ನಮ್ಮ ಮುಂದಿಲ್ಲ'
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಅವರ ಕಡೆಯಿಂದ ಪ್ರಸ್ತಾಪ ಬಂದರೆ ಅದನ್ನು ಅಂಗೀಕರಿಸಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ಥಾವರ್ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಕೋರ್ ಕಮಿಟಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ನಾವು ಪಕ್ಷದಿಂದ ಹೊರಹಾಕಿಲ್ಲ. ಅವರಾಗಿಯೇ ಹೊರಹೋಗಿದ್ದಾರೆ. ಪ್ರಸ್ತುತ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಬಗ್ಗೆ ನಮ್ಮ ಮುಂದೆ ಪ್ರಸ್ತಾಪ ಇಲ್ಲದ ಕಾರಣ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅವರಿಂದ ಈ ಕುರಿತು ಅಧಿಕೃತ ಪತ್ರ ಬಂದರೆ ಆ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ನಂತರ ಅದನ್ನು ಪಕ್ಷದ ಸಂಸದೀಯ ಮಂಡಳಿ ಮುಂದೆ ಇಡಲಾಗುವುದು. ಏನೇ ಇದ್ದರೂ ಈ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದು ಸಂಸದೀಯ ಮಂಡಳಿಗೆ ಮಾತ್ರ ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಒಬ್ಬ ಜನನಾಯಕ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಬಲಾಢ್ಯವಾಗಿದೆ. ಇಲ್ಲಿ ಬಿಜೆಪಿ ಮತ್ತೆ ಮೇಲೆದ್ದು ಬರಲು ಯಡಿಯೂರಪ್ಪ ಅವರ ನೆರವು ಬೇಕಾಗಿದೆ. ಆದರೆ, ಪಕ್ಷ ಸೇರುವ ಬಗ್ಗೆ ಅವರು ಪ್ರಸ್ತಾವನೆ ಸಲ್ಲಿಸಿಲ್ಲ ಎಂದರು.