'ಬಿಜೆಪಿ ಸಂಘಟನೆಗೆ ಶ್ರಮವಹಿಸಿ'
ಕನ್ನಡಪ್ರಭ ವಾರ್ತೆ ಸಿಂಧನೂರು ಜೂ.29
ಸಿಂಧನೂರು ತಾಲೂಕಿನಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಗಳಾಗಿ ಆಯ್ಕೆಯಾದರವರು ಪಕ್ಷದ ಬೆಳವಣಿಗೆಗೆ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ತತ್ವ-ಸಿದ್ಧಾಂತಗಳನ್ನರಿತು ಪಕ್ಷ ಕಟ್ಟುವಲ್ಲಿ ಶ್ರಮವಹಿಸಿಬೇಕೆಂದು ಕೊಪ್ಪಳ ಸಂಸದ ಶಿವರಾಮೇಗೌಡ ಕರೆ ನೀಡಿದರು.ನಗರದ ಕಮ್ಮವಾರಿ ಭವನದಲ್ಲಿ ನಗರ ಹಾಗೂ ತಾಲೂಕಾ ನೂತನ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷರು ಹಿರಿಯರ ಸಲಹೆ, ಮಾರ್ಗದರ್ಶನದಲ್ಲಿ ಪಕ್ಷ ಕಟ್ಟಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಈಗಿನಿಂದಲೇ ಸೈನಿಕರಂತೆ ಹೋರಾಟ ಆರಂಭಿಸಬೇಕೆಂದು ಸಲಹೆ ನೀಡಿದರು.
ಮಾಜಿ ಎಂಎಲ್ಸಿ ಹಾಲಪ್ಪಾಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪುರ, ನ.ಯೋ.ಪ್ರಾ. ಮಾಜಿ ಅಧ್ಯಕ್ಷ ಎನ್.ಶಿವನಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ನೂತನ ಅಧ್ಯಕ್ಷರು ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ನೂತನ ತಾಲೂಕಾಧ್ಯಕ್ಷರಾಗಿ ದೇವೇಂದ್ರಪ್ಪ ನಾಯಕ, ನಗರ ಘಟಕ ಅಧ್ಯಕ್ಷರಾಗಿ ಮಧ್ವರಾಜ್ ಆಚಾರ್ಯ ಅಚ್ಚಡಕರ್ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಿಗೆ ಕಾರ್ಯಕರ್ತರು, ಅಭಿಮಾನಿಗಳು ಹೂಮಾಲೆ ಹಾಕಿ ಗೌರವಿಸಿದರು.ಈ ಸಂದರ್ಭದಲ್ಲಿ ನ.ಯೋ.ಪ್ರಾ.ಮಾಜಿ ಅಧ್ಯಕ್ಷ ಈರೇಶ ಇಲ್ಲೂರು, ಮುಖಂಡರಾದ ಕೊಲ್ಲಾ ಶೇಷಗಿರಿರಾವ್, ಬಂಡೇಶ ವಲ್ಕಂದಿನ್ನಿ, ಉಮೇಶ ಸಜ್ಜನ್, ಹನುಮಂತಪ್ಪ ಪುಲದಿನ್ನಿ, ಸುಬ್ಬಾರಾವ್ ಮತ್ತಿತರರು ಉಪಸ್ಥಿತರಿದ್ದರು.