ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಬಿಎಸ್ಇ ಪಠ್ಯ ಕೊರತೆ; ಪ್ರತಿಭಟನೆ

Rashmi Kasaragodu
Updated On : 30 Jun 2013, 12:25 pm

ರಾಯಚೂರು: ಪ್ರಥಮ ಪಿಯುಸಿ ಕೋರ್ಸ್ಗೆ ಹೊಸ ಪಠ್ಯಪುಸ್ತಕಗಳನ್ನು ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಮತ್ತಿತರೆ ಸಂಘಟನೆಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು.
 ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸರ್ಕಾರದ ಅಸಮರ್ಪಕ ಕಾರ್ಯವೈಖರಿ ಖಂಡಿಸಿ ಘೋಷಣೆ ಕೂಗಿದರು. ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಹೊಸಪಠ್ಯಕ್ರಮದಂತೆ ಪಿಯುಸಿ ಕೋರ್ಸ್ ಆರಂಭಿಸಿದ್ದು, ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಲ್ಲದೇ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ವ್ಯಾಸಂಗಕ್ಕೆ ತೊಂದರೆ: ಪಿಯುಸಿ ಪ್ರಥಮ ವರ್ಷದ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಮಾದರಿಯ ಪಠ್ಯಕ್ರಮದ ಪುಸ್ತಕಗಳನ್ನು ಇದುವರೆಗೆ ವಿತರಿಸಿಲ್ಲ. ಈಗಾಗಲೇ ತರಗತಿಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದೆ ಎಂದು ದೂರಿದರು.
ಕಳೆದ ವರ್ಷ ಸಿಬಿಎಸ್ಇ ಮಾದರಿಯ ಪಠ್ಯಕ್ರಮವನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಳವಡಿಸಿದ ವೇಳೆಯೇ ಕಲಾ ಮತ್ತು ವಾಣಿಜ್ಯ ವಿಭಾಗದವರಿಗೆ 2013ರಿಂದ ಸಿಬಿಎಸ್ಇ ಮಾದರಿ ಅಳವಡಿಸಲು ಸರ್ಕಾರ ಯೋಜಿಸಿತ್ತು. ಆದರೆ ಆಗಿನಿಂದಲೇ ಸರ್ಕಾರ ಪೂರ್ವಸಿದ್ಧತೆ ಮಾಡಿಕೊಳ್ಳದಿರುವುದು ಸದ್ಯ ವಿದ್ಯಾರ್ಥಿಗಳಿಗೆ ಅಡಚಣೆಯುಂಟು ಮಾಡಿದೆ ಎಂದು ಟೀಕಿಸಿದರು.
ವಿದ್ಯಾರ್ಥಿಗಳಲ್ಲಿ ಅಸಮಾಧಾನ: ಈಗಾಗಲೇ ಕಾಲೇಜುಗಳು ಆರಂಭವಾಗಿ ತಿಂಗಳು ಕಳೆದಿದೆ. ಶೈಕ್ಷಣಿಕ ವರ್ಷ ಆರಂಭಗೊಂಡರೂ ಸಿಬಿಎಸ್ ಇ ಮಾದರಿಯ ಪಠ್ಯಕ್ರಮದ ಪುಸ್ತಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಬಹುತೇಕ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯವಾಗದ್ದರಿಂದ ವಿದ್ಯಾರ್ಥಿಗಳಲ್ಲಿ ಅಸಮಾಧಾನ ಮೂಡಿಸಿದೆ ಎಂದು ದೂರಿದರು.ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಒದಗಿಸದಿದ್ದರೆ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಇದರಿಂದ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಆರೋಪಿಸಿದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು, ಕೂಡಲೇ ಪಠ್ಯಪುಸ್ತಕಗಳ ಮುದ್ರಣ ಮತ್ತು ವಿತರಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಾಕಷ್ಟು ವಿಳಂಬ ವ್ಯವಸ್ಥೆ ವಿಳಂಬ: ಅದೇ ರೀತಿ ಸಾರಿಗೆ ಸಂಸ್ಥೆಯು ಪ್ರತಿವರ್ಷ ಶೈಕ್ಷಣಿಕ ವರ್ಷದ ಆರಂಭದೊಂದಿಗೆ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ ವಿತರಣೆಗೆ ಚಾಲನೆ ನೀಡುತ್ತಿತ್ತು. ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಕೌಂಟರ್ಗಳನ್ನು ತೆರೆದು ಅಲ್ಲಿಯೇ ವಿದ್ಯಾರ್ಥಿಗಳಿಗೆ ನೇರವಾಗಿ ರಿಯಾಯಿತಿ ಬಸ್ಪಾಸ್ಗಳನ್ನು ನೀಡಲಾಗುತ್ತಿತ್ತು.
ಆದರೆ ಪ್ರಸಕ್ತ ವರ್ಷ ಬಸ್ಪಾಸ್ ವಿತರಣೆಯ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡಿದ್ದು, ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ಶಾಲೆಗಳ ಮುಖ್ಯಗುರುಗಳಿಗೆ ತಮ್ಮ ಪ್ರಮಾಣ ಪತ್ರ ಸಲ್ಲಿಸಬೇಕು. ಆಗ ಶಾಲೆಯ ಶಿಕ್ಷಕರೇ ಸಾರಿಗೆ ಸಂಸ್ಥೆಗೆ ದಾಖಲೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಬಸ್ಪಾಸ್ ಪಡೆದು ವಿತರಿಸುವ ವ್ಯವಸ್ಥೆ ಜಾರಿಗೆ ತಂದಿದ್ದು, ಇದರಿಂದ ಸಾಕಷ್ಟು ವಿಳಂಬವಾಗುತ್ತಿದೆ ಎಂದು ಟೀಕಿಸಿದರು.
ಹಣ ನೀಡಿ ಸಂಚಾರ: ಶಿಕ್ಷಕರು ಕಾರ್ಯ ಒತ್ತಡದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳ ಪಾಸ್ಗಳನ್ನು ಒಂದೇ ಬಾರಿಗೆ ಸಾರಿಗೆ ಸಂಸ್ಥೆಗೆ ಕೊಂಡೊಯ್ಯುತ್ತಿದ್ದು ಅದರಿಂದ ವಿದ್ಯಾರ್ಥಿಗಳು ದಿನವೂ ಬಸ್ನಲ್ಲಿ ಹಣ ನೀಡಿ ಸಂಚರಿಸುವಂತಾಗಿದೆ. ಅಷ್ಟೇ ಅಲ್ಲ ಬಸ್ಪಾಸ್ಗಾಗಿ ತಿಂಗಳುಗಟ್ಟಲೇ ಕಾಯುವಂತಾಗಿದೆ ಎಂದು ಆರೋಪಿಸಿದರು.
ಕಾರಣ ಕೂಡಲೇ ಈ ಮೊದಲಿನಂತೆಯೇ ಬಸ್ಪಾಸ್ಗಳನ್ನು ನಿಲ್ದಾಣಗಳಲ್ಲಿ ಕೌಂಟರ್ ತೆರೆದು ಅಲ್ಲಿಯೇ ನೇರವಾಗಿ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಒತ್ತಾಯಿಸಿದರು.
ಎಐಡಿಎಸ್ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಚೀಕಲಪರ್ವಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾಧ್ಯಕ್ಷೆ ಚೇತನಾ ಬನಾರೆ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement