ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಲವೆಡೆ ಏಕಮುಖ ಸಂಚಾರಕ್ಕೆ ಅವಕಾಶ

Rashmi Kasaragodu
Updated On : 30 Jun 2013, 12:23 pm

ಕನ್ನಡಪ್ರಭ ವಾರ್ತೆ   ರಾಯಚೂರು   ಜೂ.29ನಗರದಲ್ಲಿ ದಿನೆದಿನೇ ಜನ ಹಾಗೂ ವಾಹನಗಳ ಸಂಚಾರ ದಟ್ಟಣೆ ಹೆಚ್ಚಳದ ಹಿನ್ನೆಲೆಯಲ್ಲಿ ಅಪಘಾತ ತಡೆ ಹಾಗೂ ಸರಾಗ ಸಂಚಾರ ಕೈಗೊಳ್ಳಲು ಏಕಮುಖ ಸಂಚಾರಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶಿಸಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಣಿಜ್ಯಿಕವಾಗಿ ವಹಿವಾಟು ನಡೆಸುವ ಪ್ರಮುಖ ಪ್ರದೇಶದ ರಸ್ತೆಗಳಾದ ಪಟೇಲ್ ರಸ್ತೆಯಲ್ಲಿ ಈಗಾಗಲೇ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ಲಾರಿಗಳಿಗೆ ಸರಕು ತುಂಬುವ ಹಾಗೂ ಇಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಈ ನಿಟ್ಟಿನಲ್ಲಿ ಪರಿಶೀಲನೆ ಅವಶ್ಯಕ ಎಂದರು.
ಸ್ಥಳ ಬದಲಿಸಿ: ಸಭೆಯಲ್ಲಿ ಮಾತನಾಡಿದ ಎಎಸ್ ಪಿ ಡಾ.ದಿವ್ಯಾ ಗೋಪಿನಾಥ್, ನಗರದ ರಸ್ತೆಗಳು ಕಿರಿದಾಗಿದ್ದು, ಜನ ಸಂದಣಿ ಹಾಗೂ ವಾಹನಗಳ ಓಡಾಟವನ್ನು ನಿಯಂತ್ರಿಸುವುದು ಕಷ್ಟ. ಬಟ್ಟೆ ಬಜಾರ್ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಈಗಿನ ವಾಹನ ನಿಲುಗಡೆ ಸ್ಥಳಗಳನ್ನು ಬದಲಿಸಿ ಹಳೇ ಸರ್ಕಾರಿ ದವಾಖಾನೆ ಹತ್ತಿರ ವಾಹನ ನಿಲುಗಡೆಗೆ ಜಾಗ ಗುರ್ತಿಸುವುದು ಅವಶ್ಯಕ ಎಂದರು.
ತೀನ್ ಕಂದೀಲ್ನ ಕಲ್ಲಾನೆ ಬಳಿ ಬೆಳಗ್ಗೆ ನೂರಾರು ಕಾರ್ಮಿಕರು ಕೆಲಸಕ್ಕಾಗಿ ಕಾದು ನಿಲ್ಲುತ್ತಿದ್ದು, ಅದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅವರಿಗಾಗಿ ಪ್ರತ್ಯೇಕ ಜಾಗ ಗುರ್ತಿಸುವುದು, ಗೋಶಾಲಾ ರಸ್ತೆಯಲ್ಲಿ ಬಹಳಷ್ಟು ಗ್ಯಾರೇಜುಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳೆಲ್ಲವೂ ರಸ್ತೆ ಆಕ್ರಮಿಸಿವೆ. ಇಂಥ ಪರಿಸ್ಥಿತಿಗಳಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ವಿವರಿಸಿದರು.
ಅವೈಜ್ಞಾನಿಕ ವೇಗ ತಡೆ: ನಗರದಲ್ಲಿ ಹಲವು ಕಡೆ ರಸ್ತೆಗಳಲ್ಲಿನ ವೇಗ ತಡೆಗಳು ಅವೈಜ್ಞಾನಿಕವಾಗಿದ್ದು, ಅವುಗಳಿಂದ ಅಪಘಾತವಾಗುತ್ತಿದೆ. ರಸ್ತೆಗಳಲ್ಲಿ ಸೂಚನಾ ಫಲಕಗಳಿಲ್ಲದಿರುವುದು, ವೇಗದ ಮಿತಿಯನ್ನು ನಿಗದಿಗೊಳಿಸಿ ಸೂಚನಾ ಫಲಕ ಅಳವಡಿಸುವುದು ತೀರಾ ಅವಶ್ಯಕ. ಈ ಕುರಿತು ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ  ಆಧಿಕಾರಿಗಳಿಗೆ ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಆಟೋ ಚಾಲಕರ ಹೆಸರು, ಅವರ ಲೈಸನ್ಸ್ ನಂಬರ್, ಆಟೋ ನಂಬರ್ ಇತ್ಯಾದಿಗಳನ್ನು ಪ್ರಯಾಣಿಕರಿಗೆ ಕಾಣುವಂತೆ ಆಟೋಗಳಲ್ಲಿ ಬರೆಯಿಸಬೇಕು. ಚಾಲನಾ ಲೈಸನ್ಸ್ರಹಿತ ಆಟೋ ಚಾಲಕರು ನಗರದಲ್ಲಿ ಹೆಚ್ಚಾಗಿ ಆಟೋ ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಪಘಾತಗಳು ನಡೆದಾಗ ಪೋಲೀಸ್ ಇಲಾಖೆಗೆ ಇದರಿಂದ ತೊಂದರೆ ಹೆಚ್ಚು ಎಂದರು.
ಮಾಹಿತಿಗೆ ಸೂಚನೆ: ನಗರದ ಪ್ರಮುಖ ರಸ್ತೆಗಳಾದ ಬಟ್ಟೆ ಬಜಾರ್, ಕಿರಾಣಾ ಬಜಾರ್ ಮತ್ತಿತರೆಡೆ ಏಕಮುಖ ಸಂಚಾರ ಹಾಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಬಗ್ಗೆ ಸಾಧಕ ಬಾಧಕಗಳ ಮಾಹಿತಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ನಾಗರಾಜು ಸೂಚಿಸಿದರು.
ನಗರದಲ್ಲಿ ಬಿಎಸ್ಸೆನ್ನೆಲ್, ಜೆಸ್ಕಾಂ, ಒಳಚರಂಡಿ ಕಾಮಗಾರಿ ಸೇರಿ ಇನ್ನಿತರೆ ಕಾರ್ಯಗಳಿಗೆ ರಸ್ತೆ ಅಗೆಯುವ ಮೊದಲು ನಗರಸಭೆಯ ಪರವಾನಿಗೆ ಪಡೆಯಬೇಕು.  ಈ ಕುರಿತು ನಗರಸಭೆಯೂ ಸಂಬಂಧಿಸಿದವರಿಂದ ನಿಗದಿತ ಶುಲ್ಕ ವಸೂಲಿ ಮಾಡಿ ರಸ್ತೆ ಅಗೆದು ಕೆಲಸ ಪೂರ್ಣಗೊಳಿಸಿದ ನಂತರ ರಸ್ತೆ ದುರಸ್ತಿಗೊಳಿಸಬೇಕೆಂದು ಎಸ್ಪಿ ಎಸ್.ಬಿ. ಬಿಸನಳ್ಳಿ ಹೇಳಿದರು. ಸಭೆಯಲ್ಲಿ ಆರ್ಟಿಒ ಸಿದ್ದಲಿಂಗಯ್ಯ, ಸಂಚಾರಿ ಘಟಕದ ಪೊಲೀಸ್ ಅಧಿಕಾರಿಗಳು, ಕೆಶಿಪ್ ಮತ್ತಿತರೆ ಇಲಾಖೆಯ ಅಧಿಕಾರಿಗಳಿದ್ದರು.
ಪರಿಶೀಲನೆ: ನಂತರ  ಎಸ್ಪಿ ಮತ್ತಿತರರು ನಗರದ ಪ್ರಮುಖ ಸಂಚಾರಿ ದಟ್ಟಣೆಯಿರುವ ಸ್ಥಳಗಳಿಗೆ ತೆರಳಿ ಪಾರ್ಕಿಂಗ್ ಬಗ್ಗೆ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement