ಮಹಿಳೆಯರ ಸುರಕ್ಷತಾ ಕ್ರಮಕ್ಕೆ ಒತ್ತಾಯ
ಗುಲ್ಬರ್ಗ: ಮಹಿಳೆಯರ ಸುರಕ್ಷತೆಗೆ ಹಾಗೂ ಭದ್ರತೆಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಎಐಡಿವೈಓ ಜಿಲ್ಲಾ ಸಮಿತಿ ಮುಖಂಡರು ಡಿಸಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ದೆಹಲಿ ಯುವತಿಯ ಅತ್ಯಾಚಾರ ಪ್ರಕರಣ ಇಡೀ ದೇಶದ ಆತ್ಮಸಾಕ್ಷಿಯನ್ನು ಕಲಕಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಘೋರ ಕೃತ್ಯದಿಂದ ಜನರು ತಲ್ಲಣಗೊಂಡಿದ್ದಾರೆ ಎಂದರು.
ಚುಡಾಯಿಸುವಿಕೆ, ಮಾನಭಂಗ, ಪೀಡನೆ, ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ದಾಖಲಾತಿ ಮತ್ತು ತನಿಖೆ ಶೀಘ್ರವಾಗಿ ಜರುಗಿಸಬೇಕು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ನಿರಂತರವಾಗಿ ಗಮನ ಹರಿಸಬೇಕು, ಇಂತಹ ಪ್ರಕರಣಗಳ ಸಹಿಸುವಿಕೆ ಶೂನ್ಯಕ್ಕಿಳಿಸಬೇಕು ಮತ್ತು ಅಲಕ್ಷ್ಯ ಮಾಡಕೂಡದೆಂದು ಒತ್ತಾಯಿಸಿದ್ದಾರೆ.
ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾದ ಪೀಡಿತರಿಗೆ ವೈದ್ಯಕೀಯ ಪರೀಕ್ಷೆಯನ್ನು ಅವರ ಚಾರಿತ್ರ್ಯದ ಕುರಿತು ಯಾವುದೇ ದೂಷಣೆ ಮಾಡದೇ ಒಬ್ಬ ಮಹಿಳಾ ವೈದ್ಯರಿಂದ ಸೂಕ್ಷ್ಮವಾಗಿ ಮಾಡಿಸಬೇಕು. ಪೀಡಿತರು ಬಯಸಿದರೆ ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಅವರು ಬಯಸುವ ವೈದ್ಯರನ್ನು ಜೊತೆಗಿರಿಸಿಕೊಳ್ಳಲು ಅವಕಾಶವಿರಬೇಕೆಂದು ಮನವಿ ಮಾಡಿದ್ದಾರೆ. ಜಿಲ್ಲಾಡಳಿತವು ಹೆಣ್ಣುಮಕ್ಕಳಿಗೆ ಸ್ವಯಂರಕ್ಷಣಾ ತರಬೇತಿ ನೀಡುವ ವ್ಯವಸ್ಥೆಯನ್ನು ಮಾಡಲಿ ಎಂದು ಜಿಲ್ಲಾ ಕಾರ್ಯದರ್ಶಿ ಮಹೇಶ ನಾಡಗೌಡ ಆಗ್ರಹಿಸಿದ್ದಾರೆ.