ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುಸ್ಲಿಂ- ಹಿಂದೂ ತಾರತಮ್ಯ ಸರಿಯಲ್ಲ

Rashmi Kasaragodu
Updated On : 2 Mar 2013, 11:55 am


ರಾಯಚೂರು: ಉಗ್ರರಾದ ಅಫ್ಜಲ್ ಗುರು ಮತ್ತು ಕಸಬ್ ಅವರನ್ನು ಗಲ್ಲಿಗೇರಿಸಿರುವ ಕ್ರಮವನ್ನು ಸ್ವಾಗತಿಸಿರುವ ಹೈದರಾಬಾದ್‌ನ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ದೇಶದ್ರೋಹ ಕೃತ್ಯ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವುದು ಸೂಕ್ತ ಎಂದು ಹೇಳಿದರು.
ನಗರದಲ್ಲಿ ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಜಗತ್ತಿಗೆ ಉತ್ತಮ ಪ್ರಜಾಪ್ರಭುತ್ವ ನಮ್ಮದು ಎಂಬುದನ್ನು ಸಾಬೀತು ಮಾಡಿದ್ದೇವೆ. ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ವಿಧಿಸುವ ಮೊದಲು ಆತನ ಹೆಂಡತಿಗೆ ಮಾತನಾಡುವ ಅವಕಾಶ ನೀಡಬೇಕಿತ್ತು ಎಂದರು.
ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಗಲ್ಲು ಶಿಕ್ಷೆ ನೀಡಿದ್ದು ಸ್ಪಷ್ಟಪಡಿಸಿದೆ. ಆದರೆ ವೀರಪ್ಪನ್ ಸಹಚರರಿಗೆ ರಾಷ್ಟ್ರಪತಿಗಳು ಕ್ಷಮಾದಾನ ತಿರಸ್ಕರಿಸಿದರೂ ಪುನಾ ಸುಪ್ರೀಂಕೋರ್ಟಿಗೆ ಮೊರೆ ಹೋಗಿರುವುದು ಸರಿಯಲ್ಲ.
ಗಲ್ಲು ಶಿಕ್ಷೆ ನೀಡಿಕೆ ವಿಳಂಬ ಮಾಡುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ಮುಸ್ಲಿಮರ ಗಲ್ಲಿಗೆ ಹೆಚ್ಚಿನ ಆಸಕ್ತಿ: ವೀರಪ್ಪನ್ ಸಹಚರರಿಗೆ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ತರಲು ಕಾಲವಕಾಶ ನೀಡಲಾಯಿತು. ಹಾಗೆಯೇ ಅವರ ಕುಟುಂಬದವರ ಭೇಟಿಗೆ ಅವಕಾಶ ನೀಡಲಾಯಿತು.
 ಅದೇ ರೀತಿ ರಾಜೀವಗಾಂಧಿ ಹಂತಕರನ್ನು ಶೀಘ್ರ ಗಲ್ಲಿಗೇರಿಸಲು ಆಸಕ್ತಿ ತೋರಲಿಲ್ಲ. ಅವರ ಕುಟುಂಬದವರಿಗೂ ಭೇಟಿ ನೀಡಲು ಅವಕಾಶ ಕಲ್ಪಿಸಲಾಯಿತು. ಆದರೆ ಮುಸ್ಲಿಮರು ದೇಶದ್ರೋಹದ ಕಾರ್ಯ ಮಾಡಿದರೆ ಅವರಿಗೆ ಗಲ್ಲು ಶಿಕ್ಷೆ ನೀಡಲು ಹೆಚ್ಚಿನ ಆಸಕ್ತಿ ತೋರಲಾಗುತ್ತಿದೆ. ಅವರ ಕುಟುಂಬದವರಿಗೆ ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ ಬ್ಯಾಂಕ್ ಆಗಿ ಬಳಕೆ: ದೇಶದಲ್ಲಿ ಇದುವರೆಗೆ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿವೆಯೇ ವಿನಾ ಅವರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿಲ್ಲ. ತಮ್ಮ ಪಕ್ಷ ಹೊರತುಪಡಿಸಿ ಇನ್ನುಳಿದ ಯಾವುದೇ ರಾಜಕೀಯ ಪಕ್ಷವು ಮುಸ್ಲಿಮರ ಪರ ಚಿಂತನೆ ಮಾಡಿಲ್ಲ ಎಂದು ಆರೋಪಿಸಿದರು. ಕೇಂದ್ರದ ಯುಪಿಎ ಸರ್ಕಾರ ಸಾಚಾರ್ ಕಮಿಟಿ ವರದಿಯ ಜಾರಿಗೆ ಮುಂದಾಗಿಲ್ಲ. ಇದು ಕಾಂಗ್ರೆಸ್ ಮುಸ್ಲಿಂ ವಿರೋಧಿ ಎಂಬುದನ್ನು ಸಾಬೀತು ಮಾಡಿದೆ.
ಮುಸ್ಲಿಮರ ಏಳಿಗೆಗೆ ಬಿಡುಗಡೆಯಾದ ಅನುದಾನ ಪೂರ್ಣ ಬಳಕೆಯಾಗದೇ ಅನೇಕ ಬಾರಿ ಮರಳಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement