ನೀರಮಾನವಿ; ಯಲ್ಲಮ್ಮ ದೇವಿ ರಥೋತ್ಸವ
ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.2
ಮಾನವಿ ತಾಲೂಕಿನ ನೀರಮಾನವಿ ಗ್ರಾಮದ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದಲ್ಲಿ ಸಕಲ ವಾದ್ಯಗಳೊಂದಿಗೆ ರಥದ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಕಳಾಸರೋಹಣ ಮಾಡಲಾಯಿತು. ನಂತರ ಸಂಜೆ 5.30ಕ್ಕೆ ತಹಸೀಲ್ದಾರ್ ಎಂ. ಗಂಗಪ್ಪ ಕಲ್ಲೂರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವ ಜರುಗುತ್ತಿದ್ದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತ ಸಮೂಹ ಚಪ್ಪಾಳೆ ತಟ್ಟಿ ಜೈಕಾರ ಹಾಕಿದರು. ಜಾತ್ರೆ ಸಂದರ್ಭ ಭಕ್ತರು ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನ ಸಮಿತಿಯಿಂದ ಆಸ್ಪತ್ರೆಗಳ ವ್ಯವಸ್ಥೆ, ದೇವದಾಸಿ ಪದ್ಧತಿ ಹೋಗಲಾಡಿಸಲು ಜನತೆಗೆ ತಿಳಿವಳಿಕೆ ಮೂಡಿಸುವ ಬೀದಿ ನಾಟಕಗಳ ಪ್ರದರ್ಶನ ಮತ್ತು ರೈತರಿಗೆ ಕೃಷಿಯ ಮಾಹಿತಿ, ಮಹಿಳಾ ಸಂಘಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಿಗಿ ಬಂದೋಬಸ್ತ್: ಜಾತ್ರೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಲು ತಾತ್ಕಾಲಿಕ ಪೋಲಿಸ್ ಠಾಣೆ ತೆರೆಯಲಾಗಿದ್ದು, ದೇವಸ್ಥಾದ ನಾಲ್ಕು ಕಡೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಸಿಪಿಐ ಶ್ರೀಧರದೊಡ್ಡಿ, ಪಿಎಸ್ಐ ದೀಪಕ್ ಭೂಸರೆಡ್ಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಶಾಸಕ ಹಂಪಯ್ಯ ನಾಯಕ, ಮುಖಂಡರಾದ ದದ್ದಲ ಬಸನಗೌಡ, ನಾಗನಗೌಡ ಶ್ರೀರಾಮುಲು, ರಾಮಣ್ಣ, ಜೆ. ನಾಗರಾಜ ನಾಯಕ, ಪಂಪಾಪತಿ ಪೂಜಾರಿ, ಸಿದ್ದರಾಮ ನೀರಮಾನ್ವಿ, ಬಸಪ್ಪ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ, ವಿದ್ಯಾಸಾಗರ, ಲಚಮಣ್ಣ ನಾಯಕ, ಗೋಪಾಲ ನಾಯಕ ಸೇರಿ ಗ್ರಾಮದ ಅನೇಕರಿದ್ದರು.