ಪರಿಹಾರಕ್ಕೆ ಸಂತ್ರಸ್ತರ ಅಲೆದಾಟ
ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ, ರಾಯಚೂರು, ಮಾ.2
ಬಡತನ, ನಿರುದ್ಯೋಗದಿಂದ ಬೇಸತ್ತು ಬದುಕು ಕಟ್ಟಿಕೊಳ್ಳಲು ಹೊರಟವರು ಅಂದು ಹೆಣವಾಗಿ ಮನೆಗೆ ಮರಳಿದ್ದರು. ರಾಜ್ಯ ಕಂಡ ಭೀಕರ ಬಸ್ ದುರಂತದಲ್ಲಿ ಮೃತರ ಕುಟುಂಬದವರಿಗೆ ಸಾರಿಗೆ ಸಂಸ್ಥೆ ಪರಿಹಾರ ಪ್ರಕಟಿಸಿತು. ಹಾಗೆಯೇ ಆಗಿನ ಸಿಎಂ ಸಹ ಮೃತರ ಸಂಬಂಧಿಗಳಿಗೆ ತಲಾ 1 ಲಕ್ಷ ಪರಿಹಾರದ ಭರವಸೆ ಕೊಟ್ಟರು. ಪರಿಹಾರ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಕುಟುಂಬಗಳು ದಯನೀಯ ಸ್ಥಿತಿಗೆ ತಲುಪಿವೆ.
ಇದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿ 2010ರ ಮೇ 30ರಂದು ಸಂಭವಿಸಿದ್ದ ಬಸ್ ಅಪಘಾತದಲ್ಲಿ ಸಂಬಂಧಿಗಳನ್ನು ಕಳೆದುಕೊಂಡ ಲಿಂಗಸ್ಗೂರು ತಾಲೂಕಿನ ಕೋಠಾ ಗ್ರಾಮದವರ ಇಂದಿನ ಸ್ಥಿತಿ.
ಬೆಂಗಳೂರಿನಲ್ಲಿ ಬದುಕು ಕಂಡುಕೊಳ್ಳಲು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಕೋಠಾ ಗ್ರಾಮದ ಅನೇಕರು ಗುಲ್ಬರ್ಗ ಜಿಲ್ಲೆಯ ಸುರಪುರದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ಏರಿದ್ದರು. ಆದರೆ ಆ ಬಸ್ ಚಳ್ಳಕೆರೆಯ ಬಳಿ ರಸ್ತೆ ಬದಿಯ ಸೇತುವೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿದ್ದರಿಂದ ಡೀಸೆಲ್ ಸೋರಿಕೆಯಾಗಿ ಬೆಂಕಿ ಹೊತ್ತಿ 30 ಜನ ಸಾವಿಗೀಡಾಗಿದ್ದರು.
ಪರಿಹಾರ ಕಾರ್ಯ: ಆ ಘಟನೆಯ ವೇಳೆ ಮೃತರಲ್ಲಿ ಬಹುತೇಕರು ಕೂಲಿ ಕಾರ್ಮಿಕರಿದ್ದರು. ಅವರಲ್ಲಿ ಲಿಂಗಸ್ಗೂರು ತಾಲೂಕಿನ ಕೋಠಾ ಗ್ರಾಮದ ಐದು ಕುಟುಂಬಗಳ 10 ಜನರಿದ್ದರು. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸಾರಿಗೆ ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಂಡಿದ್ದರು.
ಅದೇ ವೇಳೆ ಅಪಘಾತದಲ್ಲಿ ಮೃತರಿಗೆ ಸಾರಿಗೆ ಸಂಸ್ಥೆಯಿಂದ ವಿಮಾ ಮೊತ್ತವಾಗಿ ತಲಾ 2.50 ಲಕ್ಷ ಪರಿಹಾರ ನೀಡುವ ಘೋಷಣೆಯನ್ನೂ ಮಾಡಲಾಯಿತು. ಪರಿಹಾರ ನಂತರದಲ್ಲಿ ಮೃತರ ಸಂಬಂಧಿಗಳಿಗೆ ನೀಡಲಾಗಿದೆ. ಆದರೆ ಅದೇ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೃತರ ಕುಟುಂಬದವರಿಗೆ 5 ಲಕ್ಷ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿದ್ದರು.
ಮರೆವು: ಆದರೆ ಆಗಿನ ಸಿಎಂ ಯಡಿಯೂರಪ್ಪ ಅವರು ಮೃತರ ಕುಟುಂಬದವರಿಗೆ ಸಿಎಂ ಪರಿಹಾರ ನಿಧಿಯಿಂದ 1 ಲಕ್ಷ ನೀಡುವುದಾಗಿ ಘೋಷಿಸಿದರು. ಹಾಗೆಯೇ ಮೃತರ ಕುಟುಂಬದವರಿಗೆ ಉದ್ಯೋಗ ಭರವಸೆ ನೀಡಲಾಗಿತ್ತು. ಆದರೆ ಎಂದಿನಂತೆಯೇ ದುರಂತವನ್ನು ಸರ್ಕಾರ ಆನಂತರ ಮರೆಯಿತು.
ಪರಿಣಾಮ ಕುಟುಂಬಗಳು ಒಂದೆಡೆ ಸಂಬಂಧಿಗಳನ್ನು ಕಳೆದುಕೊಂಡ ನೋವು ಮರೆಯಲು ಸಾಧ್ಯವಾಗದೇ ಸರ್ಕಾರದಿಂದ ನೆರವೂ ದೊರೆಯದೇ ಅತಂತ್ರ ಸ್ಥಿತಿಗೆ ಸಿಲುಕಿವೆ. ಗ್ರಾಮದಲ್ಲಿನ ಎಲ್ಲ ಕುಟುಂಬಗಳಿಗೆ ಆಸರೆಯಾಗಿದ್ದವರೇ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದು ಕುಟುಂಬದವರನ್ನು ಕಂಗಾಲಾಗಿಸಿದೆ.
ಜಿಲ್ಲಾಡಳಿತಕ್ಕೆ ಅರ್ಜಿ: ಪರಿಹಾರಕ್ಕಾಗಿ ಮೃತರ ಕುಟುಂಬಗಳು ಎರಡು ವರ್ಷ ಕಾದು ಕೊನೆಗೆ ಬೇಸತ್ತು 2012ರ ಜೂ.8ರಂದು ಪರಿಹಾರ ಕೊಡಿಸುವಂತೆ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದರು. ವಿವಿಧ ಸಂಘಟನೆಗಳೂ ಇವರ ಬೆಂಬಲಕ್ಕೆ ನಿಂತವು. ಪರಿಣಾಮ ಜಿಲ್ಲಾಡಳಿತ ಪರಿಹಾರಕ್ಕೆ ಮಂಜೂರಾತಿ ನೀಡಿ ಬಿಡುಗಡೆಗೊಳಿಸುವಂತೆ ಮನವಿ ಮಾಡಿತು.
ಆದರೆ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳ ಕಚೇರಿಯು, ಈ ವಿಷಯದಲ್ಲಿ ಸರ್ಕಾರದ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡಿಕೆ ಮತ್ತು ಮೃತರ ಕುಟುಂಬದವರಿಗೆ ಉದ್ಯೋಗ ನೀಡುವುದು ಮಾರ್ಗಸೂಚಿಗಳ ಕಾರಣಕ್ಕೆ ಅಸಾಧ್ಯ ಎಂದು ಹೇಳಿತು.
ಸಾರಿಗೆ ಸಂಸ್ಥೆ ಪ್ರಾಮಾಣಿಕತೆ: ಮಾನವೀಯ ದೃಷ್ಟಿಯಿಂದ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪರಿಶೀಲಿಸುವಂತೆ ಸಲಹೆ ನೀಡಿತು. ಆದರೆ ಆನಂತರದಲ್ಲಿ ಎಂದಿನಂತೆಯೇ ಅಧಿಕಾರಿಗಳು ಹಾಗೂ ಸರ್ಕಾರ ಹೊಣೆಗಾರಿಕೆ ಮರೆತವು. ಪರಿಣಾಮ ಅಪಘಾತ ಸಂಭವಿಸಿ ಎರಡೂವರೆ ವರ್ಷಗಳಾದರೂ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಮೃತರ ಸಂಬಂಧಿಗಳು ಎಡತಾಕುತ್ತಲೇ ಸಾಗಿದ್ದಾರೆ.
ಸಾರಿಗೆ ಸಂಸ್ಥೆಯು ತನ್ನ ಪಾಲಿನ 2.50 ಲಕ್ಷ ಪರಿಹಾರವನ್ನು ಪಾವತಿಸಿ ಪ್ರಾಮಾಣಿಕತೆ ಮೆರೆದಿದೆ. ಆದರೆ ಸರ್ಕಾರಕ್ಕೆ ಇಂದಿಗೂ ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಲೆಯುವ ಕಾಯಕ: ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅಪಘಾತದಲ್ಲಿ ಮಡಿದ ಮೃತ ಗ್ಯಾನಪ್ಪ ಕಮತರ್ ಅವರ ಪುತ್ರ ಹುಚ್ಚಬುಡ್ಡೆಪ್ಪ, ಕಳೆದ ಎರಡೂವರೆ ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವುದೇ ಕೆಲಸವಾಗಿದೆ. ಕುಟುಂಬದ ಪ್ರಮುಖರೇ ನಮ್ಮನ್ನಗಲಿದ್ದಾರೆ. ಬದುಕು ಕಷ್ಟವಾಗಿದೆ. ನಮ್ಮ ಗೋಳು ಕೇಳುವವರೇ ಇಲ್ಲ ಎಂದು ಅಳಲು ತೋಡಿಕೊಂಡರು.
ಒಂದೆಡೆ ಕುಟುಂಬದವರನ್ನು ಕಳೆದುಕೊಂಡು ಬೀದಿಗೆ ಬಂದ ಸ್ಥಿತಿ. ಮತ್ತೊಂದೆಡೆ ಸರ್ಕಾರದ ಘೋಷಣೆಗಳು ಜಾರಿಗೆ ಬಾರದಿರುವುದು ಸಂತ್ರಸ್ತ ಕುಟುಂಬಗಳ ಕಷ್ಟವನ್ನು ಇಮ್ಮಡಿಗೊಳಿಸಿದೆ.
ರಾಜ್ಯ ಸರ್ಕಾರ ಈಗಲಾದರೂ ಕಣ್ಣು ತೆರೆಯಬೇಕಿದೆ. ಸಂಕಷ್ಟದಲ್ಲಿರುವವರ ಬದುಕು ಮತ್ತೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪರಿಹಾರ ಮತ್ತು ಉದ್ಯೋಗ ದೊರಕಿಸಿಕೊಡುವತ್ತ ಗಮನಹರಿಸಬೇಕಿದೆ.