ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕ್ಷಿಪ್ತ ಸುದ್ದಿ

Mainashree
Updated On : 3 Mar 2013, 12:27 pm

ಬೆಂಕಿ ಆಕಸ್ಮಿಕ: ಸಾಂತ್ವನ, ನೆರವು
ರಾಯಚೂರು: ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಈಚೆಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸುಟ್ಟಿದ್ದು, ಸಂತ್ರಸ್ತರನ್ನು ರಾಜ್ಯ ವರ್ತೂರು ಯುವಸೇನೆ ರಾಜ್ಯ ಉಪಾಧ್ಯಕ್ಷ ಕೆ. ನೀಲಕಂಠ ಬೇವಿನ್ ಭೇಟಿ ಮಾಡಿ ಸಾಂತ್ವನ ಹೇಳಿದರು. ಗ್ರಾಮಕ್ಕೆ ತೆರಳಿದ ಅವರು ನಿವಾಸಿ ಭೀಮಯ್ಯ ನಾಯಕ ಅವರನ್ನು ಭೇಟಿ ಮಾಡಿ ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸುಟ್ಟಿದ್ದಕ್ಕೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ನೀಡಿ ಜಿಲ್ಲಾಡಳಿತದಿಂದಲೂ ಅಗತ್ಯ ನೆರವು ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ನಾಯಕ ಯರಗೇರಾ, ಶ್ರೀನಿವಾಸ ರೆಡ್ಡಿ ಜುಲುಂಗೇರಾ, ತಾಯಣ್ಣ, ಕೆ. ಭೀಮಣ್ಣ ಸಂಗವಾರ, ಗ್ರಾಮಸ್ಥರು ಹಾಗೂ ಬೆಂಬಲಿಗರು ಇದ್ದರು.
ಮನೆಯಲ್ಲಿ ಕಳ್ಳತನ
ರಾಯಚೂರು: ಮಾನವಿ ತಾಲೂಕಿನ ಸಿರವಾರ ಪಟ್ಟಣದ ಮನೆಯೊಂದರಲ್ಲಿ ಕಳವು ನಡೆದಿದ್ದು, ಕಳ್ಳರು ಸಾವಿರಾರು ಬೆಲೆಯ ಆಭರಣ ದೋಚಿದ್ದಾರೆ. ಪಟ್ಟಣದ ನಿವಾಸಿ ವೀರಭದ್ರಪ್ಪ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳವು ಸಂಭವಿಸಿದ್ದು, ಮನೆಯ ಬಾಗಿಲಿನ ಬೀಗ ಮುರಿದ ಕಳ್ಳರು ಮನೆಯಲ್ಲಿದ್ದ 85 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘಕ್ಕೆ ಆಯ್ಕೆ
ರಾಯಚೂರು: ಸರ್ಕಾರಿ ನೌಕರರ ಸಂಘದ ಮಾನವಿ ತಾಲೂಕಾಧ್ಯಕ್ಷರಾಗಿ ಶ್ರೀಶೈಲಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘವು ಪ್ರಕಟಣೆ ನೀಡಿದ್ದು, ವರದರಾಜ, ರಾಮುಲು ಮತ್ತು ನಾಗನಗೌಡ(ಉಪಾಧ್ಯಕ್ಷ), ಶಂಕರ ಕುರ್ಡಿ(ಪ್ರಧಾನ ಕಾರ್ಯದರ್ಶಿ), ಚಂದಪ್ಪ(ಸಹ ಕಾರ್ಯದರ್ಶಿ), ಖಾಜಾ ಮೊಯಿನುದ್ದೀನ್, ಕೆ.ಟಿ. ಅರಳಪ್ಪ ಸಂಘಟನಾ ಕಾರ್ಯದರ್ಶಿ ಮತ್ತು ಎಚ್. ನಾಗಮ್ಮ(ಮಹಿಳಾ ಪ್ರತಿನಿಧಿ) ಆರೀಫ್ ಮಿಯಾ(ಖಜಾಂಚಿ) ಅವರನ್ನು ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.
'ಕೆಜೆಪಿ ಬೆಂಬಲಿಸಿ'
ರಾಯಚೂರು: ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಜನತಾ ಪಾರ್ಟಿಗೆ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ನಗರದಲ್ಲಿ ಶನಿವಾರ ಸಂಜೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ತಿಂಗಳ ಹಿಂದಷ್ಟೇ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು ಕಡಿಮೆ ಅವಧಿಯಲ್ಲಿ ಎಲ್ಲ ವಾರ್ಡುಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಕಷ್ಟದ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಧ್ಯವಿರುವೆಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ತಿಳಿಸಿದರು. ತಾವು ಚುನಾವಣೆ ಪ್ರಚಾರಕ್ಕಾಗಿ ಪ್ರವಾಸ ಕೈಗೊಂಡ ವೇಳೆ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದ ಅವರು, ಸಿಎಂ ಶೆಟ್ಟರ್ ಅವರು ಕೆಜೆಪಿಯ ಬಗ್ಗೆ ಹೇಳಿಕೆ ನೀಡುವ ಮೊದಲು ಅವರನ್ನು ಸಿಎಂ ಮಾಡಿದ್ದು ಯಡಿಯೂರಪ್ಪ ಎಂಬುದನ್ನು ಮರೆಯದಂತೆ ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement