ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆರ್‌ಟಿಇ: ಸಲಹಾ ಸಮಿತಿ ರದ್ದತಿಗೆ ಕೋರ್ಟ್ ಮೊರೆ

Lingaraj Badiger
Updated On : 4 Mar 2013, 11:32 am

ರಾಯಚೂರು: ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆ ಹಾಗೂ ರಾಜ್ಯ ಸರ್ಕಾರ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿ ರಚಿಸಿದ ಸಲಹಾ ಸಮಿತಿಯನ್ನು ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಮಗು ಮತ್ತು ಕೇಂದ್ರ ರಾಷ್ಟ್ರೀಯ ಕಾನೂನು ಶಾಲೆಯ ಫೆಲೋ ಮುಖ್ಯಸ್ಥ ನಿರಂಜನಾರಾಧ್ಯ ಹೇಳಿದರು.
ನಗರದಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸಲಹಾ ಸಮಿತಿಯ ನೇಮಕಾತಿಯಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯ ಪರಿಣಾಮಕಾರಿ ಜಾರಿಗೆ ಸಲಹೆ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಜ್ಞಾನ ಮತ್ತು ಪ್ರಾಯೋಗಿಕತೆಯ ಅರಿವಿರುವವರನ್ನು ನೇಮಿಸಬೇಕಿತ್ತು. ಸಲಹಾ ಸಮಿತಿಯಲ್ಲಿ ಶೇ. 50ರಷ್ಟು ಮಹಿಳೆಯರಿರಬೇಕು. ಆದರೆ ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.
ಮಹಿಳೆಯರಿಗೆ ಅವಕಾಶ ನೀಡಿಲ್ಲ: ಸದ್ಯ ರಚಿಸಿರುವ ಸಲಹಾ ಸಮಿತಿಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿಲ್ಲ. ಖಾಸಗಿ ಶಾಲೆಗಳನ್ನು ಗುರುತಿಸುವ ಕಾರ್ಯಕ್ಕೆ ಸಲಹಾ ಸಮಿತಿಯನ್ನು ನೇಮಿಸಿದಂತಿದೆ ಎಂದ ಅವರು, ಈ ಸಲಹಾ ಸಮಿತಿ ರಚನೆ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿಸಾಸಕ್ತಿ ಅರ್ಜಿ ದಾಖಲಿಸುವುದಾಗಿ ತಿಳಿಸಿದರು.
ಕಡ್ಡಾಯ ಶಿಕ್ಷಣ ಕಾಯಿದೆಯ ಅನುಸಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಮಾ. 30ರೊಳಗೆ ಮೂಲಸೌಲಭ್ಯ ಕಲ್ಪಿಸುವ ಅವಶ್ಯಕತೆಯಿದೆ. ಆದರೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ವಹಿಸುವ ಶಾಲೆಗಳಲ್ಲಿ ಶೇ. 25ರಷ್ಟು ಪ್ರವೇಶ ನೀಡಿದರೆ ಸಾಕು ಎಂಬ ಮನೋಭಾವ ಬೆಳೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನುಷ್ಠಾನ ಹಿನ್ನಡೆಗೇನು ಕಾರಣ?: ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯ ಜಾರಿಗೆ ಮುಂದಾಗಿದೆ. ಅದಕ್ಕಾಗಿ ನಿಯಮಗಳನ್ನು ತರಾತುರಿಯಲ್ಲಿ ರೂಪಿಸಿದ್ದು, ಅನುಷ್ಠಾನದಲ್ಲಿ ತೀವ್ರ ಹಿನ್ನಡೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಕಾಯಿದೆಯ 29ನೇ ಕಲಂ ಅನುಸಾರ ಗುಣಮಟ್ಟದ ಶಿಕ್ಷಣ ನೀಡಿಕೆ ಬಗ್ಗೆ ಸ್ಪಷ್ಟ ನಿರ್ದೇಶನಗಳಿವೆ. ಅದೇ ರೀತಿ ಅಲ್ಪಸಂಖ್ಯಾತರ ಶಾಲೆಗಳಿಗೆ ಸಂಬಂಧಿಸಿ ನಿಯಮ ರೂಪಿಸುವಲ್ಲಿ ಪುನಾ ಪರಿಶೀಲನೆ ಅಗತ್ಯತೆಯಿದೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ಉಚಿತ ಶಿಕ್ಷಣ ಕಾಯಿದೆ ರಾಜ್ಯದಲ್ಲಿ ಜಾರಿಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರಾಜಕೀಯಕ್ಕೆ ಬಳಕೆ- ಆರೋಪ: ಬೆಂಗಳೂರು ಬಳಿಯ ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ಶಿಕ್ಷಣವನ್ನು ಚುನಾವಣೆಯ ಚರ್ಚೆಯ ವಿಷಯವಾಗಿಸುವ ಉದ್ದೇಶವಿದೆ ಎಂದ ಅವರು, ಶಿಕ್ಷಣ ಭದ್ರತೆ ಕಲ್ಪಿಸುವ ರಾಜಕೀಯ ಪಕ್ಷಗಳಿಗೆ ಮತ ನೀಡಬೇಕೆಂಬುದು ಸಮಾವೇಶದ ಘೋಷಣೆಯಾಗಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement