ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಒಂದು ಶಿಕ್ಷಣ ಸಂಸ್ಥೆ ನೂರು ದೇಗುಲಗಳಿಗೆ ಸಮ

Lingaraj Badiger
Updated On : 4 Mar 2013, 11:37 am

ಸಿಂಧನೂರು: ನೂರು ಚರ್ಚ್, ಮಸೀದಿ, ದೇವಾಲಯಗಳಿಗೆ ಒಂದು ಶಿಕ್ಷಣ ಸಂಸ್ಥೆ ಸಮವಾಗಿದೆ ಎಂದು ರಂಭಾಪುರಿ ಶಾಖಾಮಠ ಸೋಮನಾಥ ಶಿವಾಚಾರ್ಯ ಹೇಳಿದರು.
ನಗರದಲ್ಲಿ ಇತ್ತೀಚೆಗೆ ವಿಜಯ ಪಬ್ಲಿಕ್ ಶಾಲೆಯ ಪ್ರಥಮ ವಾರ್ಷಿಕೋತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಯಮದಿಂದ ಪಾಠ ಮಾಡಬೇಕು. ಪಾಲಕರು ಶಿಕ್ಷಕರಿಗೆ ಸಹಕರಿಸಬೇಕು. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಬೇಕು. ಈ ಮೂರು ಕಾರ್ಯಗಳು ನಡೆದಾಗ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು.
ಆಧುನಿಕ ತಂತ್ರಜ್ಞಾನ ಬಳಕೆ: ಶಾಲಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಇಂದಿರಾನಗರದಲ್ಲಿ ಸೂಗೂರೇಶ್ವರ ಚಾರಿಟಬಲ್ ಟ್ರಸ್ಟ್‌ನಿಂದ ವಿಜಯ ಪಬ್ಲಿಕ್ ಶಾಲೆ ಕಳೆದ ವರ್ಷ ಆರಂಭಗೊಂಡಿದ್ದು ಈ ಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಥಮ ವರ್ಷದ ಕಾರ್ಯಕ್ರಮಕ್ಕೆ ಆಗಮಿಸಿದ ಪಾಲಕರನ್ನು ಗಮನಿಸಿದರೆ ಇದು ಸಾಬೀತಾಗುತ್ತದೆ. ಆರಂಭದ ವರ್ಷದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಎಜುಕಾಮ್ ಹಾಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ಆರಂಭಿಸಿದ ಏಕೈಕ ಸಂಸ್ಥೆ ಇದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ವೀರೇಶ ದೇವರಗುಡಿ, ಸೈಯದ್ ಅಮ್ಜದ್‌ಅಲಿ, ಟ್ರಸ್ಟ್ ಖಜಾಂಚಿ ಚಂದ್ರಿಕಾ ಹಿರೇಮಠ ಪಾಲ್ಗೊಂಡಿದ್ದರು.
ಟ್ರಸ್ಟ್ ಕಾರ್ಯದರ್ಶಿ ನಿರಂಜನ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂಗ್ಲಿಷ್ ವ್ಯಾಮೋಹ ಸರಿಯಲ್ಲ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ ಗುಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಾಲಕರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹಚ್ಚಬೇಕೆಂಬ ವ್ಯಾಮೋಹ ಹೆಚ್ಚುತ್ತಲಿದೆ. ಕರ್ನಾಟಕದಲ್ಲಿ ಮೊದಲು ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡಬೇಕು. ಇಂಗ್ಲಿಷ್ ಭಾಷೆ ಕಲಿಯುವುದು ಅವಶ್ಯ. ಆದರೆ ಕನ್ನಡವನ್ನೇ ಮರೆತು ಆಂಗ್ಲ ವ್ಯಾಮೋಹ ಅಳವಡಿಸಿಕೊಳ್ಳುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸನ್ಮಾನ: ವಿಜಯ ಪಬ್ಲಿಕ್ ಶಾಲೆಯ ಪ್ರಧಾನ ಕಾರ್ಯದರ್ಶಿ ನಿರಂಜನಮೂರ್ತಿ ಹಿರೇಮಠ, ಖಜಾಂಚಿ ಚಂದ್ರಿಕಾ ಹಿರೇಮಠರನ್ನು ರಂಭಾಪುರಿ ಸ್ವಾಮೀಜಿ ಸನ್ಮಾನಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮವನ್ನು ಐಶ್ವರ್ಯ ಹಿರೇಮಠ, ಸೌಂದಯ್ಯ ಹಿರೇಮಠ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement