ಚುನಾವಣಾ ಪ್ರಚಾರಕ್ಕೆ ಮಕ್ಕಳ ಬಳಕೆ: ಖಂಡನೆ
ಸಿಂಧನೂರು: ಸ್ಥಳೀಯ ನಗರಸಭೆಗೆ ಮಾ.7ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಶಾಲಾ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡು ಅವರಿಗೆ 50ರಿಂದ 100ರವರೆಗೆ ಹಣ, ಅಲ್ಪೋಪಹಾರದ ಆಸೆ ತೋರಿಸಿ ಅವರನ್ನು ಶೈಕ್ಷಣಿಕವಾಗಿ ಹಾಳುಗೆಡುವುತ್ತಿದ್ದಾರೆ.
ಅಲ್ಲದೆ ನಾಡು- ನುಡಿ, ನೆಲ- ಜಲ, ಸಂಸ್ಕೃತಿಗೆ ಅಪಚಾರ ಉಂಟು ಮಾಡಲು ಹೊರಟಿರುವುದನ್ನು ಅಖಿಲ ಕರ್ನಾಟಕ ಕನ್ನಡ ಚಳವಳಿ ಖಂಡಿಸಿರುವುದಾಗಿ ರಾಜ್ಯ ಸಂಚಾಲಕ ಕೆ.ಬಾಳಪ್ಪ ತಿಳಿಸಿದ್ದಾರೆ. ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ನೀಡಿ, ಚುನಾವಣಾ ನೀತಿ ಉಲ್ಲಂಘನೆ ಇದ್ದರೂ ಯಾವ ಪಕ್ಷಗಳು ಭಯ ಪಡೆದೇ ಮಕ್ಕಳ ಮುಗ್ಧ ಮನಸ್ಸು ಹಾಳು ಮಾಡಿ ರಾಜಕೀಯ ವಿಷಬೀಜ ಬಿತ್ತಲು ಹೊರಟಿವೆ.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೌನವೇ ಇದಕ್ಕೆ ಪರೋಕ್ಷ ಕಾರಣವಾಗಿದೆ.
ಆದ ಕಾರಣ ಕೂಡಲೇ ಆಯಾ ಸರ್ಕಾರಿ, ಖಾಸಗಿ ಶಾಲಾ ಮಕ್ಕಳಿಗೆ ನಗರ ಪ್ರದೇಶದ ಶಾಲಾ ಶಿಕ್ಷಕರು ಮಕ್ಕಳಿಗೆ ತಿಳಿ ಹೇಳಿ ಮುಂದೆ ಒದಗುವ ಹಾನಿಯ ಬಗ್ಗೆ ವಿವರ ನೀಡುವಂತೆ ಜಿಲಾದ್ಯಂತ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಚುನಾವಣಾ ಆಯೋಗ ಕೂಡ ಸಂಬಂಧಪಟ್ಟ ರಾಜಕೀಯ ಪಕ್ಷಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕೆಂದು ಚಳವಳಿ ಜಿಲ್ಲಾ ಉಪಾಧ್ಯಕ್ಷ ರಡ್ಡೆಪ್ಪ ತೂಗೇಮನಿ, ಕಾಟಿಬೇಸ್ ಅಧ್ಯಕ್ಷ ಹಸನ ಟೇಲರ ಮತ್ತಿತರರು ಒತ್ತಾಯಿಸಿದ್ದಾರೆ.