'ಜಲ ನಿರ್ಮಲ ಕಾಮಗಾರಿ ವಿಳಂಬವಾದರೆ ಕಠಿಣ ಕ್ರಮ'
ಸಿಂಧನೂರು: ತಾಲೂಕಿನ ವಿವಿಧ ಗ್ರಾಪಂ.ಗಳಲ್ಲಿ ಜಾರಿಯಾಗಿರುವ ಜಲ ನಿರ್ಮಲ ಯೋಜನೆ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಕೂಡಲೇ ಕಾಮಗಾರಿ ಕೈಗೆತ್ತಿಕೊಂಡು ಸರಿಯಾದ ಸಮಯದಲ್ಲಿ ಮುಗಿಸದಿದ್ದರೆ ಗುತ್ತೇದಾರ, ಪಿಡಿಒಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಲನಿರ್ಮಲ ಯೋಜನೆಯ ಉಪಯೋಜನಾ ವ್ಯವಸ್ಥಾಪಕ ಅಣ್ಣಾಯಪ್ಪ ಎಚ್ಚರಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಜಲನಿರ್ಮಲ ಯೋಜನೆ ಪ್ರಗತಿಗೆ ಸಂಬಂಧಿಸಿದಂತೆ ಗ್ರಾಪಂ.ಗಳ ಅಧ್ಯಕ್ಷರು, ಪಿಡಿಒಗಳ ಹಾಗೂ ಗುತ್ತೇದಾರರ ಸಭೆ ನಡೆಸಿದರು. ಯಾವ ಕ್ಷಣದಲ್ಲಾದರೂ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಬಹುದಾಗಿದೆ. ಚುನಾವಣೆ ಘೋಷಣೆಯಾದರೆ ಅನುದಾನ ಬಿಡುಗಡೆಯಾಗುವುದಿಲ್ಲ. ಗುತ್ತೇದಾರರು ಕಾಮಗಾರಿ ಗುಣಮಟ್ಟದೊಂದಿಗೆ ಚುರುಕಿನಿಂದ ಕಾರ್ಯನಿರ್ವಹಿಸಬೇಕಿದೆ. ಪಿಡಿಒಗಳು ಹಾಗೂ ಅಭಿಯಂತರರು ಆಗಾಗ ವೀಕ್ಷಣೆ ಮಾಡಬೇಕು.
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮುಂಬರುವ ಬೇಸಿಗೆಯಲ್ಲಿ ಕುಡಿವ ನೀರಿನ ಬವಣೆ ಉಂಟಾಗಲಿದೆ. ಕೂಡಲೇ ಕಾಮಗಾರಿಗಳನ್ನು ಮಾಡುವಂತೆ ಗುತ್ತೇದಾರರಿಗೆ ಸೂಚಿಸಿದರು. ಜಲ ನಿರ್ಮಲ ಯೋಜನೆ ಉಪನಿರ್ದೇಶಕ ಆರ್.ಕೆ. ಕೊಳೆಕಾರ, ತಾಂತ್ರಿಕ ಉಪನಿರ್ದೇಶಕ ಉಮೇಶ ಯೋಜನೆಗೆ ಸಂಬಂಧಿಸಿದಂತೆ ಆಯಾ ಗ್ರಾಪಂ.ಗಳ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಗುತ್ತೇದಾರರು ಪಾಲ್ಗೊಂಡಿದ್ದರು.