ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ದಸಂಸ ಒತ್ತಾಯ
ರಾಯಚೂರು: ಸಿಂಧನೂರು ನಗರದಲ್ಲಿ ಮಟಕಾ, ಖಾಸಗಿ ವಾಹನಗಳಿಂದ ಅಕ್ರಮ ಹಣ ವಸೂಲಿ ಮತ್ತು ಅಕ್ರಮ ಮದ್ಯದ ಮಾರಾಟ ಬಹಿರಂಗವಾಗಿ ಸಾಗಿದ್ದು, ಇದಕ್ಕೆ ಕೆಲ ಪೊಲೀಸರು ಬೆಂಬಲಿಸುತ್ತಿದ್ದಾರೆಂದು ದಲಿತ ಸಂಘರ್ಷ ಸಮಿತಿ (ಸಮತಾವಾದ) ಆರೋಪಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಗೃಹ ಸಚಿವರಿಗೆ ದೂರಿರುವ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಡ್ಯಾನಿಯಲ್ ಕೊಲಿಮಿ ಮತ್ತು ಉಪಪ್ರಧಾನ ಸಂಚಾಲಕ ವೆಂಕಟೇಶ್, ಸಿಂಧನೂರು ನಗರ ಠಾಣೆಯ ಪಿಎಸ್ಸೈ ಲಿಂಗಪ್ಪ ಎಂಬುವವರು ಅಕ್ರಮ ದಂಧೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ದೂರಿದ್ದಾರೆ.
ಮಟಕಾ, ಇಸ್ಪೀಟ್ ಜೂಜು, ಖಾಸಗಿ ವಾಹನಗಳಿಂದ ವಸೂಲಿ ಮಾಡುವುದು, ಅನಗತ್ಯವಾಗಿ ರೈತರಿಗೆ ಕಿರುಕುಳ ನೀಡುವ ಕಾರ್ಯವನ್ನು ಪಿಎಸ್ಸೈ ಮಾಡುತ್ತಿದ್ದಾರೆ. ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 12ರವರೆಗೆ ಕಾರ್ಯನಿರ್ವಹಿಸಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆಂದು ಆರೋಪಿಸಿದ್ದಾರೆ.
ಸಿಂಧನೂರಿನ ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ನೀಡುವ ಪಿಎಸ್ಸೈಗೆ ಅವರ ಜಾತಿಯ ರಾಜಕೀಯ ನಾಯಕರು ಬೆಂಬಲ ನೀಡುತ್ತಿದ್ದಾರೆಂದು ಆರೋಪಿಸಿರುವ ಅವರು, ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಪಿಎಸ್ಸೈ ಲಿಂಗಪ್ಪ ಮತ್ತು ಅವರ ವಾಹನ ಚಾಲಕ ನಾಗಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.