ಯಥಾಸ್ಥಿತಿಯಲ್ಲಿ ನೀರು ಪೂರೈಕೆ
ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.3: ಬೇಸಿಗೆ ಮುನ್ನವೇ ತಲೆದೋರಿದ ಕುಡಿವ ನೀರಿನ ಸಮಸ್ಯೆ ನೀಗಿಸುವ ಪ್ರಯತ್ನ ಯಶ ಕಂಡಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ರಾಂಪುರ ಕೆರೆಯಲ್ಲಿ ನೀರು ಭರ್ತಿ ಕಾರ್ಯ ಜಾರಿಯಲ್ಲಿದೆ. ಆದರೆ ನೀರು ಪೂರೈಕೆಯ ವ್ಯವಸ್ಥೆಯಲ್ಲಿ ಯಾವುದೇ ರೀತಿಯಲ್ಲಿ ಮಾರ್ಪಾಟು ಮಾಡುವ ಸಾಧ್ಯತೆಯಿಲ್ಲ ಎಂದು ನಗರಸಭೆ ಮೂಲಗಳು ತಿಳಿಸಿವೆ.
ನಗರಕ್ಕೆ ಕುಡಿಯುವ ನೀರೊದಗಿಸುವ ರಾಂಪುರ ಕೆರೆ ಬರಿದಾಗಿದ್ದರಿಂದ ನಗರ ಕಳೆದ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಗೆ ಸಿಲುಕಿತ್ತು. ಪರಿಣಾಮ ನಗರದ ಕೆಲ ವಾರ್ಡಗಳಿಗೆ ದಿನ ಬಿಟ್ಟು ದಿನ ನೀರೊದಗಿಸುವ ಪದ್ಧತಿ ಜಾರಿಗೆ ತರಲಾಗಿದೆ.
ಕೆರೆ ಶೀಘ್ರ ಭರ್ತಿ: ರಾಂಪುರ ಕೆರೆ ಭರ್ತಿಗೂ ಮೊದಲು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನಿಸಿ ಗಣೇಕಲ್ ಜಲಾಶಯದಲ್ಲಿ ಎಡದಂಡೆ ಕಾಲುವೆಯ ಮೂಲಕ ತುಂಗಭದ್ರಾ ನದಿ ನೀರು ಭರ್ತಿ ಮಾಡಿಕೊಂಡಿದೆ. ಅಲ್ಲಿಂದ ರಾಂಪುರ ಕೆರೆಗೆ ಸದ್ಯ ನೀರು ಹರಿಸುವ ಕಾರ್ಯ ಜಾರಿಯಲ್ಲಿದೆ. ಕೆರೆಯನ್ನು ಆದಷ್ಟು ತ್ವರಿತವಾಗಿ ತುಂಬಿಕೊಳ್ಳುವ ಕಾರ್ಯದಲ್ಲಿ ನಗರಸಭೆ ಆಡಳಿತ ನಿರತವಾಗಿದೆ.
ಈ ಮಧ್ಯೆ ವಿದ್ಯುತ್ ಅಡಚಣೆಯಿಂದ ನೀರು ಭರ್ತಿ ಕಾರ್ಯಕ್ಕೆ ಆಗಾಗ್ಗೆ ತೊಂದರೆಯಾಗುತ್ತಿದ್ದರೂ 12ಕ್ಕೂ ಹೆಚ್ಚಿನ ನಗರಸಭೆಯ ಸಿಬ್ಬಂದಿಯನ್ನು ಕೆರೆಯ ಬಳಿಯೇ ನಿಯೋಜಿಸಿ ನೀರು ಭರ್ತಿಗೆ ಜಿಲ್ಲಾಧಿಕಾರಿ ನಾಗರಾಜು ಅವರು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಇನ್ನೊಂದು ಭಾಗದ ನೀರು ಮಲೀನ: ಕೆರೆಯ ಒಂದು ಭಾಗದಲ್ಲಿ ಕಳೆದ ಐದು ದಿನಗಳಲ್ಲಿ ಸುಮಾರು 2.50 ಮೀಟರ್ ನೀರು ಸಂಗ್ರಹಗೊಂಡಿದೆ. ಮುಂದಿನ ಐದು ದಿನಗಳಲ್ಲಿ ಕೆರೆ ಭರ್ತಿಯಾಗುವ ಸಾಧ್ಯತೆಯಿದೆ. ಇದೇ ವೇಳೆ ಕೆರೆಯ ಇನ್ನೊಂದು ಭಾಗದಲ್ಲಿ ನೀರು ಮಲೀನಗೊಂಡಿದೆ ಎಂಬ ಅನುಮಾನದ ಮೇಲೆ ಆ ಕೆರೆಯಲ್ಲಿ ಸದ್ಯಕ್ಕೆ ನೀರು ಭರ್ತಿ ಮಾಡದಿರಲು ನಗರಸಭೆ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ಸದ್ಯ ನಗರಸಭೆಯ ಚುನಾವಣೆಯ ಭರಾಟೆಯ ಪ್ರಚಾರ ನಡೆದಿದ್ದು, ಕಳೆದ ಬಾರಿ ಸದಸ್ಯರಾಗಿದ್ದವರೇ ಪುನಾ ಸ್ಪರ್ಧಿಸಿದ್ದು ನೀರಿನ ಅಭಾವದ ಬಿಸಿ ಅವರಿಗೂ ತಟ್ಟಿದೆ. ಮತದಾರರು ಕುಡಿಯುವ ನೀರಿನ ಅಭಾವಕ್ಕೆ ಸಂಬಂಧಿಸಿ ಅಭ್ಯರ್ಥಿಗಳನ್ನು ಪ್ರಶ್ನಿಸುತ್ತಿದ್ದಾರೆ.
ದಿನ ಬಿಟ್ಟು ದಿನ ನೀರು ಮುಂದುವರಿಕೆ: ರಾಂಪುರ ಕೆರೆ ಕಳೆದ ತಿಂಗಳು ಬರಿದಾದ ಹಿನ್ನೆಲೆ ನಗರಸಭೆ ಜಾರಿಗೆ ತಂದಿದ್ದ ದಿನ ಬಿಟ್ಟು ದಿನ ನೀರು ಪೂರೈಕೆಯ ಪದ್ಧತಿ ಮುಂದೆಯೂ ಮುಂದುವರಿಯಲಿದೆ. ಮಾರ್ಚ್ ಅಂತ್ಯಕ್ಕೆ ಕಾಲುವೆಯಲ್ಲಿ ನೀರು ಸ್ಥಗಿತಗೊಳ್ಳುವ ಮೊದಲು ಗಣೇಕಲ್ ಜಲಾಶಯದಲ್ಲಿ ಮತ್ತಷ್ಟು ನೀರು ಸಂಗ್ರಹಿಸುವ ಯೋಚನೆ ಜಿಲ್ಲಾಡಳಿತದ್ದಾಗಿದೆ.
ಆದರೆ ಬೇಸಿಗೆಯ ಅಂತ್ಯದವರೆಗೆ ಸಮರ್ಪಕ ನೀರೊದಗಿಸುವ ನಿಟ್ಟಿನಲ್ಲಿ ದಿನ ಬಿಟ್ಟು ದಿನ ನೀರೊದಗಿಸುವುದು ಅನಿವಾರ್ಯ ಎಂಬ ಮಾತು ನಗರಸಭೆಯಿಂದ ಕೇಳಿಬಂದಿದೆ. ಈ ಮಧ್ಯೆ “OÚ«ÚsÚ®Úúڒ¥æàM¦Væ ಮಾತನಾಡಿದ ನಗರಸಭೆ ಪೌರಾಯುಕ್ತ ಮಂಜುನಾಥ, 'ನಗರದಲ್ಲಿ ನೀರಿನ ಪೋಲಾಗುವಿಕೆ ತಡೆವ ನಿಟ್ಟಿನಲ್ಲಿ ಜನತೆ ಸಹಕಾರ ಅಗತ್ಯ. ನಿವಾಸಿಗಳು ನೀರಿನ ಮಿತ ಬಳಕೆಗೆ ಗಮನ ನೀಡಬೇಕಿದೆ' ಎಂದು ಮನವಿ ಮಾಡಿದ್ದಾರೆ.
ನೀರು ಪೋಲು ಮಾಡಬೇಡಿ: ಒಂದೆಡೆ ಚುನಾವಣೆಯ ಕೆಲಸದ ಒತ್ತಡದ ಮಧ್ಯೆಯೂ ಜಿಲ್ಲಾಡಳಿತ ರಾಂಪುರ ಕೆರೆ ಭರ್ತಿಗೂ ಗಮನಹರಿಸಿದ್ದು, ನಗರದ ಜನತೆಗೆ ಬೇಸಿಗೆಯ ಅಂತ್ಯದವರೆಗೆ ನೀರು ದೊರೆಯುವ ಎಲ್ಲ ಲಕ್ಷಣಗಳಿವೆ. ಆದರೆ ಜನತೆ ನೀರು ವೃಥಾ ಪೋಲಾಗದಂತೆ ತಡೆದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗದು ಎಂಬ ಮಾತು ನಗರಾಡಳಿತದಿಂದ ಕೇಳಿಬಂದಿದೆ.