ಕಾಲುವೆಗೆ ನೀರು; ವಿಜಯೋತ್ಸವ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಮಾ.4
ನಾರಾಯಣಪುರ ಜಲಾಶಯದಿಂದ ಬಲದಂಡೆ ಮತ್ತು ರಾಂಪುರ ಏತನೀರಾವರಿ ಕಾಲುವೆಗೆ ನೀರು ಹರಿಸಿದ ಸರ್ಕಾರದ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ ರೈತರು ಭಾನುವಾರ ಬಲದಂಡೆ ಗೇಟ್ ಬಳಿ ವಿಜಯೋತ್ಸವ ಆಚರಿಸಿದರು.
ತಾಲೂಕಿನ ಜಾವೂರ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಕರ್ನಾಟಕ ಬಂಜಾರ ಸಂಘದಿಂದ ಕಳೆದ ಶನಿವಾರದಿಂದ 2 ದಿನಗಳ ಕಾಲ ಕೈಗೊಂಡ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಸ್ಪಂದನೆ ನೀಡಿದ ಸರ್ಕಾರ, ನೀರು ಹರಿಸಲು ಕ್ರಮ ಕೈಗೊಂಡಿರುವುದು ರೈತರ ಹೋರಟಕ್ಕೆ ಸಂದ ಜಯವಾಗಿದೆ. ಲಿಂಗಸ್ಗೂರು ಮತ್ತು ದೇವದುರ್ಗ ತಾಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ ಶೇಂಗಾ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಇನ್ನಿತರೆ ಬೆಳೆಗಳು ನೀರಿನ ಕೊರತೆಯಿಂದ ಹಾನಿಗೀಡಾಗುವ ಸಾಧ್ಯತೆ ಒದಗಿ ಬಂದಿತ್ತು. ಇದರಿಂದ ಅನಿವಾರ್ಯವಾಗಿ ರೈತರು ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ಬಂದೊದಗಿತು.
ಸಿಎಂಗೆ ಮುಖಂಡರ ಮನವರಿಕೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ, ಶಾಸಕರಾದ ಮಾನಪ್ಪ ವಜ್ಜಲ್ ಮತ್ತು ರಾಜುಗೌಡ ನಾಯಕರು ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರನ್ನು ಭೇಟಿ ಮಾಡಿ ರೈತರ ಸಮಸ್ಯೆ ಕುರಿತು ಸುಧೀರ್ಘ ಚರ್ಚೆ ನಡೆಸುವ ಮೂಲಕ ನೀರು ಹರಿಸಲು ಶ್ರಮಿಸಿದ್ದಾರೆ. ಸರ್ಕಾರದ ಆದೇಶದಂತೆ ಕೆಬಿಜೆಎನ್ನೆಲ್ ಅಧಿಕಾರಿಗಳು ಸೋಮವಾರ ಬೆಳಗ್ಗೆ ಬಲದಂಡೆ ಕಾಲುವೆ ಗೇಟ್ ಎತ್ತುವ ಮೂಲಕ 800 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ಸಂಸತ ಮೂಡಿಸಿದೆ ಎಂದರು.
ಹೋರಾಟ ಬೆಂಬಲಿಸಿದವರಿಗೆ ಅಭಿನಂದನೆ: ರೈತರು ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಸಹಕರಿಸಿ ಬೆಂಬಲಿಸಿದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವರ್ತಕರು, ಮಾಧ್ಯಮ ಮಿತ್ರರು ಪಕ್ಷಾತೀತವಾಗಿ ಪಾಲ್ಗೊಂಡು ಹೋರಾಟದ ಯಶಸ್ವಿಗೆ ಕಾರಣರಾದ ಎಲ್ಲರಿಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ, ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಬಂಜಾರ ಸಂಘದ ಪಾಂಡುರಂಗ ಪಮ್ಮಾರ ಅವರು ಅಭಿನಂದನೆ ಸಲ್ಲಿಸಿದರು.
ಬಂಜಾರ ಸಮಾಜದ ಮುಖಂಡರಾದ ಜೀವಲೆಪ್ಪ ನಾಯಕ, ಲಾಲಪ್ಪ ರಾಠೋಡ್, ಮಾನಪ್ಪ ಚವ್ಹಾಣ, ನಾರಾಯಣಪ್ಪ ನಾಯಕ, ನಾಗರಡ್ಡಿ, ಸಂಗಣ್ಣ, ಅಮರೇಶ ಮಾರಲದಿನ್ನಿ, ಅಮರೇಶ ಪವಾರ ಇದ್ದರು.