ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತದಾರರ ಓಲೈಕೆಗೆ ಕಡೆ ಪ್ರಯತ್ನ

Lingaraj Badiger
Updated On : 5 Mar 2013, 10:54 am

ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.4
ವಿವಿಧ ರಾಜಕೀಯ ಪಕ್ಷಗಳಿಗೆ ಬಂಡಾಯದ ಬಿಸಿ. ಅತೃಪ್ತರ ಮನವೊಲಿಕೆ ಕೈಬಿಟ್ಟ ಪಕ್ಷಗಳು ಗೆಲವಿಗೆ ರಣತಂತ್ರಕ್ಕೆ ಮೊರೆ. ಮತದಾರರಿಗೆ ವಿವಿಧ ಆಮಿಷಗಳ ಹೊಳೆ. ಬಹಿರಂಗ ಪ್ರಚಾರದ ಗಡುವು ಸಮೀಪಿಸುತ್ತಿದ್ದಂತೆಯೇ ಅಭ್ಯರ್ಥಿಗಳ ಎದೆಬಡಿತ ಹೆಚ್ಚಿದೆ. ಪ್ರಚಾರದ ಅಬ್ಬರ ತೀವ್ರಗೊಂಡಿದ್ದು, ಕಣದಲ್ಲಿ ವದಂತಿಗಳೂ ಹರಡಿ ಅಭ್ಯರ್ಥಿಗಳನ್ನು ಗೊಂದಲಕ್ಕೆ ಬೀಳಿಸುತ್ತಿವೆ.
ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆಯಲಿರುವ ಚುನಾವಣೆಯ ಸದ್ಯದ ಪರಿಸ್ಥಿತಿಯ ಚಿತ್ರವಿದು.
ಭರವಸೆಗಳ ಹೊಳೆ: ಬಹಿರಂಗ ಪ್ರಚಾರ ಈ ಬಾರಿ ಮತದಾನಕ್ಕೂ 48 ಗಂಟೆ ಮುಂಚೆಯೇ ಪೂರ್ಣಗೊಳ್ಳಲಿದೆ. ಹೀಗಾಗಿ ಮನೆ ಮನೆಗೆ ತೆರಳಿ ಮತದಾರರಿಗೆ ಆಶ್ವಾಸನೆಗಳ ಸುರಿಮಳೆ ಸುರಿದು ಮತ ಗಿಟ್ಟಿಸಿಕೊಳ್ಳುವ ಕಾರ್ಯಕ್ಕೆ ಅಭ್ಯರ್ಥಿಗಳು ಮುಂದಾಗಿದ್ದಾರೆ. ಮತದಾರರಿಗೆ ವಿವಿಧ ಆಮಿಷಗಳ ಜತೆ ಜತೆಗೆ ಭರವಸೆಗಳ ಹೊಳೆಯನ್ನು ಅಭ್ಯರ್ಥಿಗಳು ಹರಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಟ್ಟಕಡೆಯ ಪ್ರಯತ್ನವಾಗಿ ಅಬ್ಬರದ ಪ್ರಚಾರ ಜಾರಿಯಲ್ಲಿದ್ದು, ಅಭ್ಯರ್ಥಿಗಳು ಈಗಾಗಲೇ ತಾವು ಸ್ಪರ್ಧಿಸಿದ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದಂತೆಯೇ ಮತದಾರನ ಮತ್ತಷ್ಟು ಓಲೈಕೆಗೆ ಎಲ್ಲ ರಾಜಕೀಯ ಪಕ್ಷಗಳು ಹರಸಾಹಸ ಮಾಡಲಿವೆ ಎಂಬುದರಲ್ಲಿ ಸಂದೇಹವಿಲ್ಲ.
ಬಲಾಬಲ ಪ್ರದರ್ಶನ: ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆ ಮುಂದಿನ ದಿನಗಳಲ್ಲಿ ನಡೆಯುವ ವಿಧಾನಸಭೆಯ ಚುನಾವಣೆಗೆ ಭದ್ರ ಬುನಾದಿಯಾಗಲಿದೆ ಎಂಬ ರಾಜಕೀಯ ಲೆಕ್ಕಾಚಾರದಿಂದಾಗಿಯೇ ಪ್ರಮುಖ ಎಲ್ಲ ಪಕ್ಷಗಳು ಗೆಲವಿಗೆ ಶತಾಯ ಗತಾಯ ಪ್ರಯತ್ನಕ್ಕೆ ಮುಂದಾಗಿವೆ.
ಈ ಮಧ್ಯೆ ಮತದಾರರಿಗೆ ಹಣ, ಹೆಂಡದ ಹಂಚಿಕೆ ಯಾವುದೇ ಅಡೆತಡೆಯಿಲ್ಲದೇ ಸಾಗಿದ್ದು, ಪ್ರಚಾರ ಕಾರ್ಯಕ್ಕಾಗಿ ಭಾರೀ ಸಂಖ್ಯೆಯ ಬೆಂಬಲಿಗರನ್ನು ಜಮಾಯಿಸುವ ಮೂಲಕ ಬಲಾಬಲ ಪ್ರದರ್ಶನ ಮಾಡಲಾಗುತ್ತಿದೆ. ಮೂಲ ಸೌಲಭ್ಯಗಳ ಕೊರತೆಯ ಬಿಸಿ ಮತದಾರರು ಅಭ್ಯರ್ಥಿಗಳಿಗೆ ಮುಟ್ಟಿಸಿದ್ದಾರೆ. ಆದರೆ ಅಭ್ಯರ್ಥಿಗಳದ್ದು 'ಅದೇ ರಾಗ ಅದೇ ಹಾಡು', ಈ ಬಾರಿ ಗೆಲ್ಲಿಸಿದರೆ ಎಲ್ಲ ಸವಲತ್ತು ಒದಗಿಸುತ್ತೇವೆಂಬ ಭರವಸೆಯ ಮಾತು ಕೇಳಿಬರುತ್ತಿದೆ.
ಅತೃಪ್ತರ ಸೆಡ್ಡು: ರಾಯಚೂರು ನಗರಸಭೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವವರನ್ನು ಕಣದಿಂದ ಹಿಂದೆ ಸರಿಸಿ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ವಿವಿಧ ರಾಜಕೀಯ ಪಕ್ಷಗಳು ಕೊನೆಯ ಕ್ಷಣದ ಪ್ರಯತ್ನಕ್ಕೆ ತೊಡಗಿವೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕೃತ ಅಭ್ಯರ್ಥಿಗಳಿಗೆ ಆಯಾ ಪಕ್ಷಗಳ ಅತೃಪ್ತರೇ ಪೈಪೋಟಿ ನೀಡುತ್ತಿರುವುದು ಸಂಕಷ್ಟ ತಂದಿದೆ.
ಪಕ್ಷದ ನಾಯಕರಿಗೆ ಚುನಾವಣೆಯಲ್ಲಿ ಸೋಲುಣಿಸುವ ಮೂಲಕ ಮುಖಭಂಗ ಉಂಟಾಗಬೇಕೆಂಬ ಛಲ ಅತೃಪ್ತರಲ್ಲಿದ್ದು, ಅದರಿಂದಾಗಿಯೇ ಅವರು ಅಧಿಕೃತ ಅಭ್ಯರ್ಥಿಯನ್ನೇ ಗುರಿಯಾಗಿಸಿಕೊಂಡು ಚುನಾವಣೆ ಪ್ರಚಾರದಲ್ಲಿ ತೊಡಗಿರುವುದು ಪಕ್ಷಗಳ ಪಾಲಿಗೆ ನುಂಗದ ಬಿಸಿ ತುಪ್ಪದಂತಾಗಿದೆ.
ಅಗ್ನಿ ಪರೀಕ್ಷೆ: ಈ ನಡುವೆ ಸಚಿವ ಅರವಿಂದ ಲಿಂಬಾವಳಿ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಮತ್ತು ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಹಾಗೆಯೇ ಕೆಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಬಿಎಸ್ಸಾರ್ ಕಾಂಗ್ರೆಸ್ ನಾಯಕ ಶ್ರೀರಾಮುಲು ಚುನಾವಣೆಯ ಹಿನ್ನೆಲೆ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದಾರೆ. ಸದ್ಯದ ಚುನಾವಣೆ ಬಿಎಸ್ಸಾರ್ ಮತ್ತು ಕೆಜೆಪಿ ಪಕ್ಷಗಳ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಈ ಎರಡೂ ಪಕ್ಷಗಳಿಗೆ ಸವಾಲಾಗಿದೆ. ಈ ಚುನಾವಣೆಯ ಫಲಿತಾಂಶದಿಂದಲೇ ಈ ಎರಡೂ ಪಕ್ಷಗಳತ್ತ ಮತದಾರರ ಒಲವು ಸ್ಪಷ್ಟವಾಗಲಿದೆ.
ಈ ಬಾರಿಯ ಚುನಾವಣೆ ಕಣ ವದಂತಿಗಳ ಆಗರವಾಗಿದೆ. ಕೆಲ ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆಂಬ ವದಂತಿ ಹರಡಿಸುವ ಮೂಲಕ ಅಭ್ಯರ್ಥಿಗಳನ್ನು ಕಂಗೆಡುವಂತೆ ಮಾಡಿದ್ದಿದೆ. ಹಾಗಾಗಿ ಅಭ್ಯರ್ಥಿಗಳು ನಾವಿನ್ನೂ ಕಣದಲ್ಲಿ ಇದ್ದೇವೆ ಎಂದು ಪ್ರಚಾರ ಚುರುಕುಗೊಳಿಸಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಕಣದಲ್ಲಿರುವುದಾಗಿ ಘೋಷಿಸಿದ್ದಾರೆ.
ಮತದಾನದ ದಿನ ಸಮೀಪಿಸುತ್ತಿರುವುದು ಅಭ್ಯರ್ಥಿಗಳಲ್ಲಿ ಬೇಗುದಿಗೆ ಕಾರಣವಾಗಿದೆ. ಆದರೆ ಮತದಾರರು ಮೌನ ಮುರಿದಿಲ್ಲ. ಪರಿಣಾಮ ಅಭ್ಯರ್ಥಿಗಳಲ್ಲಿ ಆತಂಕ ಹೆಚ್ಚಿದೆ.

ಅಕ್ರಮ ಮದ್ಯ ಜಪ್ತಿ
ರಾಯಚೂರು: ನಗರದ ಗಂಗಾಪರಮೇಶ್ವರಿ ಲೇಔಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 50 ಸಾವಿರ ಬೆಲೆಯ ಮದ್ಯ ವಶಪಡಿಸಿಕೊಳ್ಳಲಾಗಿದೆ. ಗಂಗಾಪರಮೇಶ್ವರಿ ಬಡಾವಣೆಯ ನಿವಾಸಿ ತಿಮ್ಮಪ್ಪ ಎಂಬುವವರು ತಮ್ಮ ಮನೆಯಲ್ಲಿ ವಿವಿಧ ಕಂಪನಿಗಳ ಮದ್ಯವನ್ನು 24 ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿದರ ಸುಳಿವು ಪಡೆದ ಪೊಲೀಸರು ದಾಳಿ ಮಾಡಿ ಜಪ್ತಿ ಮಾಡಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement