ಲಿಂಗಸ್ಗೂರು ಮೀಸಲು ಕ್ಷೇತ್ರಕ್ಕೆ ನಾನು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ: ಪಮ್ಮಾರ್
ಕ.ಪ್ರ. ವಾರ್ತೆ, ಲಿಂಗಸ್ಗೂರು, ಮಾ.4
ಬಂಜಾರ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೋಟಿಗಟ್ಟಲೇ ಹಣ ನೀಡುವ ಮೂಲಕ ಸಮಾಜಕ್ಕೆ ಅನೇಕ ಸೌಕರ್ಯ ಒದಗಿಸಿದೆ. ಈ ನಿಟ್ಟಿನಲ್ಲಿ ಲಿಂಗಸ್ಗೂರು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿರುವುದಾಗಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಪಾಂಡುರಂಗ ಪಮ್ಮಾರ್ ಸ್ಪಷ್ಟಪಡಿಸಿದರು.
ಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿ 248 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಒಟ್ಟು 5,878 ತಾಂಡಾಗಳಿದ್ದು, ಅವುಗಳಲ್ಲಿ 1,345 ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಿದೆ. 878 ತಾಂಡಾಗಳಲ್ಲಿ ನೈರ್ಮಲ್ಯ ನಿರ್ಮಿಸಿದೆ.
ಬಿಜೆಪಿ ಅಭಿವೃದ್ಧಿಪರ ಚಿಂತನೆ: ಬಂಜಾರ ನಿಗಮದಿಂದ ಬಿಜಾಪುರ, ಗುಲ್ಬರ್ಗ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿದಂತೆ 6 ಜಿಲ್ಲೆಗಳಲ್ಲಿ ತಲಾ 2 ಕೋಟಿ ವೆಚ್ಚದಲ್ಲಿ ಜಿಲ್ಲಾ ಭವನ ನಿರ್ಮಾಣ ಮಾಡಿದೆ. 778 ತಾಂಡಗಳಲ್ಲಿ 80 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಕುಲ್ಪಿಸಿದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಬಂಜಾರ ಸಮಾಜದ ಹಿರಿಯ ಅಧಿಕಾರಿಯನ್ನು ನಿಯೋಜನೆ ಮಾಡಿದೆ. ಇಂತಹ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡ ಬಿಜೆಪಿ ಸರ್ಕಾರದ ಅಭಿವೃದ್ಧಿಪರ ಚಿಂತನೆ ಮನಗಂಡು ಬಿಜೆಪಿಯಿಂದ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಸರ್ಕಾರಿ ದಿನ ಆಚರಣೆಗೆ ಒತ್ತಾಯ: ಬಂಜಾರ ಸಮಾಜದ ಆರಾಧ್ಯ ದೈವ ಸಂತ ಸೇವಾಲಾಲರ ಜಯಂತಿ ಫೆ. 15ರಂದು ಆಚರಿಸಲಾಗುತ್ತದೆ. ಆ ದಿನವನ್ನು ಸರ್ಕಾರಿ ದಿನಾಚರಣೆಯನ್ನಾಗಿ ಘೋಷಿಸಿ ಅದ್ಧೂರಿಯಾಗಿ ಆಚರಿಸಬೇಕೆಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಜೂವಲೆಪ್ಪ ನಾಯಕ, ಲಾಲಪ್ಪ ರಾಠೋಡ್, ದೇವಪ್ಪ ರಾಠೋಡ್, ಖೀರಪ್ಪ, ನಾಗರೆಡ್ಡಿ, ಹರಿಶ್ಚಂದ್ರ ಸೇರಿದಂತೆ ಇನ್ನಿತರರು ಇದ್ದರು.