ನಾಳೆ ಸಾರ್ವತ್ರಿಕ ರಜೆ
ರಾಯಚೂರು: ಜಿಲ್ಲೆಯಲ್ಲಿ ಮಾ.7ರಂದು ನಡೆಯಲಿರುವ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮತದಾನದ ಹಿನ್ನೆಲೆಯಲ್ಲಿ ಮತದಾನ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರು ಮತ ಚಲಾಯಿಸಲು ಅನೂಕೂಲವಾಗುವಂತೆ ರಜೆ ಘೋಷಿಸಲಾಗಿದೆ.
ಈ ಕುರಿತು ಜಿಲ್ಲಾಡಳಿತ ಪ್ರಕಟಣೆ ನೀಡಿದ್ದು, ಮಾ.7ರಂದು ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಚುನಾವಣೆ ನಡೆಯುವ ದಿನದಂದು ಸಾರ್ವತ್ರಿಕ ರಜೆ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲ ಸರ್ಕಾರಿ ನೌಕರರು ತಮ್ಮ ಸೇವೆಗೆ ಹಾಜರಾಗಬೇಕು. ಮತದಾನ ನಡೆಯುವ ಮತಗಟ್ಟೆಯನ್ನು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಿದ್ದಲ್ಲಿ ಅಂತಹ ಕಚೇರಿ ಹಾಗೂ ಶಾಲೆಗಳಿಗೆ ಮಾ.6 ರಂದು ಮತ್ತು ಮತ ಎಣಿಕೆಯ ಕೇಂದ್ರಗಳಲ್ಲಿ ಮಾ.11ರಂದು ಮಾತ್ರ ರಜೆಯನ್ನು ಘೋಷಿಸುವ ಅವಶ್ಯಕತೆ ಇದ್ದಲ್ಲಿ ಸಂಬಂಧ ಪಟ್ಟ ಚುನಾವಣಾಧಿಕಾರಿಗಳು ಈ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಾಗರಾಜು ತಿಳಿಸಿದ್ದಾರೆ.
ಮತದಾನದ ಸಮಯ
ರಾಯಚೂರು: ಜಿಲ್ಲೆಯಲ್ಲಿ ಮಾ.7ರಂದು ನಡೆಯಲಿರುವ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ. ರಾಯಚೂರು ನಗರಸಭೆ, ಸಿಂಧನೂರು ನಗರಸಭೆ, ಮಾನವಿ ಪುರಸಭೆ, ಲಿಂಗಸ್ಗೂರು ಪುರಸಭೆ, ದೇವದುರ್ಗ ಪುರಸಭೆ, ಮುದುಗಲ್ ಪಟ್ಟಣ ಪಂಚಾಯತಿಗಳಿಗೆ ಅಂದು ಮತದಾನ ಬೆಳಗ್ಗೆ 7ರಿಂದ ಸಂಜೆಯ 5ರವರೆಗೆ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.