ಪ್ರಾಚೀನ ಸಂಗೀತ ಕಲೆ ಉಳಿಸಲು ಸಂಸ್ಕಾರ ಭಾರತಿ ಬದ್ಧ: ಮಧುಮತಿ
ಸಿಂಧನೂರು: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸೇರಿದಂತೆ ಪ್ರಾಚೀನ ಸಂಗೀತ ಕಲೆಗಳನ್ನು ಉಳಿಸಿ, ಬೆಳೆಸಲು ಸಂಸ್ಕಾರ ಭಾರತಿ ಬದ್ಧವಾಗಿದೆ ಎಂದು ಸಂಸ್ಕಾರ ಭಾರತಿಯ ತಾಲೂಕು ಘಟಕದ ಅಧ್ಯಕ್ಷೆ ಡಾ. ಮಧುಮತಿ ದೇಶಪಾಂಡೆ ಹೇಳಿದರು.
ನಗರದಲ್ಲಿ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಚಿತ್ರಗೀತೆ ಮತ್ತಿತರ ಗೀತೆಗಳನ್ನು ಗಮನಿಸಿದಾಗ ಸಂಗೀತದ ಅಬ್ಬರದ ಮಧ್ಯೆ ಸಾಹಿತ್ಯ ಕಡಿಮೆಯಾಗುತ್ತಿದೆ. ದಾಸರು, ಶರಣರು, ತಮ್ಮ ಭಕ್ತಿ ಪಂಥದ ಸಾಧನೆಗಾಗಿ ಸಂಗೀತವನ್ನು ಬಳಸಿಕೊಂಡರು ಎಂದರು.
ಸಿಂಧನೂರು ಘಟಕದಲ್ಲಿ 55 ಜನ ಸದಸ್ಯರು ಎಲ್ಲರ ಸಹಕಾರದೊಂದಿಗೆ ಅದರಲ್ಲೂ ವಿಶೇಷವಾಗಿ ಗೌರವಾಧ್ಯಕ್ಷ ವೆಂಕಣ್ಣ ಜೋಷಿ ಅವರ ಹಿರಿತನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಸ್ಕಾರ ಭಾರತಿಯಿಂದ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
10ರಂದು ಕಾರ್ಯಕ್ರಮ: ಗೌರವಾಧ್ಯಕ್ಷ ವೆಂಕಣ್ಣ ಜೋಷಿ ಮಾತನಾಡಿ ಸಂಗೀತ, ನಾಟ್ಯ, ನಾಟಕ ಮತ್ತಿತರ ಕಲೆಗಳನ್ನು, ಕಲಾವಿದರನ್ನು ಉಳಿಸುವುದು, ಬೆಳೆಸುವುದು, ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಸಂಸ್ಕಾರ ಭಾರತಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಹಾಶಿವರಾತ್ರಿ ಜಾಗರಣೆ ಸಂಗೀತೋತ್ಸವವನ್ನು ಈ ಬಾರಿ ಕರಟೂರಿ ರಾಮರಾವ್ ಕಾಂಪೌಂಡ್‌ನಲ್ಲಿ ಮಾ.10 ರಂದು ಹಮ್ಮಿಕೊಳ್ಳಲಾಗಿದೆ. ಇದು 5ನೇ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮ ಸಾನ್ನಿಧ್ಯವನ್ನು ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯರು ವಹಿಸುವರು. ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ. ಮಧು ಮತಿ ದೇಶಪಾಂಡೆ ವಹಿಸುವರು. ನಾಡೋಜ ಬೆಳಗಲ್ ವೀರಣ್ಣ ಬಳ್ಳಾರಿ ಉದ್ಘಾಟಿಸುವರು. ಪ್ರಗತಿಪರ ರೈತ ಕರಟೂರಿ ಶ್ರೀನಿವಾಸರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಶಿವರಾತ್ರಿ ಸಂಗೀತೋತ್ಸವ: ಸಂಸ್ಕಾರ ಭಾರತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಂಗಕಲಾವಿದ ಹುಸೇನಪ್ಪ ಮಾತನಾಡಿ, ಶಿವರಾತ್ರಿ ಸಂಗೀತೋತ್ಸವದಲ್ಲಿ ಹೊನ್ನಾವರದ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಅಶೋಕ ಹುಗ್ಗಣ್ಣವರ್, ಆಕಾಶವಾಣಿ ಕಲಾವಿದರಾದ ಸ್ಮಿತಾ ಬೆಳ್ಳೂರು, ಕಿರಣಕುಮಾರ ಹಾನಗಲ್, ಈಶ್ವರ ಮೊರಗೇರಿ, ರಘುನಾಥ ಸಾ ಬದಿ, ರಾಜೇಂದ್ರನಾಥ, ಅಲ್ಲಮಪ್ರಭು ಕಡಕೋಳ, ಉದಯೋನ್ಮುಖ ಕಲಾವಿದ ವಿಜಯಕುಮಾರ ಬದಿ ತಮ್ಮ ಸಂಗೀತ ಸುಧೆಯನ್ನು ಹರಿಸುವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಕಾರ ಭಾರತಿ ಕಾರ್ಯದರ್ಶಿ ವಾಸುದೇವಿ ಜಿ. ಉಪ್ಪಳ ಇದ್ದರು.