ಶಿವರಾತ್ರಿ: ಶ್ರೀಶೈಲಂಗೆ ವಿಶೇಷ ಬಸ್ ಸೌಲಭ್ಯ
ರಾಯಚೂರು: ಈಶಾನ್ಯ ಸಾರಿಗೆ ಸಂಸ್ಥೆಯವತಿಯಿಂದ ಶಿವರಾತ್ರಿ ಅಂಗವಾಗಿ ಆಂಧ್ರದ ಪ್ರಸಿದ್ಧ ಧಾರ್ಮಿಕ ಕೇಂದ್ರ ಶ್ರೀಶೈಲಂಗೆ ವಿಶೇಷ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಈ ಕುರಿತು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಪ್ರಕಟಣೆ ನೀಡಿ, ಮಾ.5ರಿಂದಲೇ ಈ ಬಸ್ ಗಳ ಸಂಚಾರ ಆರಂಭಿಸಲಾಗುತ್ತಿದ್ದು, ಲಿಂಗಸ್ಗೂರು-ಶ್ರೀಶೈಲಂ, ಸಿಂಧನೂರು ಶ್ರೀಶೈಲಂ, ಮಾನವಿ-ಶ್ರೀಶೈಲಂ, ದೇವದುರ್ಗ-ಶ್ರೀಶೈಲಂ, ರಾಯಚೂರು-ಗದ್ವಾಲ್-ಶ್ರೀಶೈಲಂ, ರಾಯಚೂರು-ಕರ್ನೂಲು-ಶ್ರೀಶೈಲಂ ಮಾರ್ಗದಲ್ಲಿ ವಿಶೇಷ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ತಿಳಿಸಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಈ ಮಾರ್ಗಗಳಲ್ಲಿ ಬಸ್ಗಳನ್ನು ಮಾ.13 ರವರೆಗೆ ಓಡಿಸಲಾಗುತ್ತದೆ.
ಯಾವುದೇ ಸ್ಥಳದಿಂದ 50ಜನ ಪ್ರಯಾಣಿಕರು ನೇರವಾಗಿ ಶ್ರೀಶೈಲಂಗೆ ಪ್ರಯಾಣಿಸಲು ಬಯಸಿದಲ್ಲಿ ಅಂಥವರು ಆಯಾ ತಾಲೂಕುಗಳ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.