'ಅಧಿಕಾರದಿಂದ 'ಕೈ' ಹೊರಗಿಡುವ ಸಂಕಲ್ಪ'
ಶಹಾಬಾದ್: ನಗರಸಭೆ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕೈಬಿಟ್ಟಿದ್ದು, ಪಕ್ಷಕ್ಕಾಗಿ ದುಡಿದವರನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗೆ ಉಳಿಯಲಿದ್ದು, ಉಳಿದ ಪಕ್ಷಗಳ ಪ್ರಗತಿರಂಗ ರಚಿಸಲಾಗುವುದು ಎಂದು ವಾರ್ಡ್ 17ರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಇಜಾಜ್ ಪಟೇಲ್ ತಿಳಿಸಿದ್ದಾರೆ.
ಈ ಬಗ್ಗೆ ವಿವರ ನೀಡಿದ ಅವರು, ಕಳೆದ ಬಾರಿ 5 ವರ್ಷ ಅಧಿಕಾರ ನಡೆಸಿ ಕಾಂಗ್ರೆಸ್ ಜನಪರ, ಅಭಿವೃದ್ಧಿ ಪರ ಕೆಲಸ ಮಾಡದೆ ಇದ್ದು, ಸಾರ್ವಜನಿಕರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸಲು ವಿಫಲವಾಗಿದ್ದು, ಟಿಕೆಟ್ ಹಂಚಿಕೆಯಲ್ಲಿ ನಿಷ್ಠಾವಂತರನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.
ಇದರ ಪರಿಣಾಮ ಚುನಾವಣೆ ಮೇಲೆ ಬೀರಲಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಗೆಲ್ಲುವ ಅಭ್ಯರ್ಥಿಗೆ ಬೆಂಬಲಿಸಲಾಗುವುದು ಎಂದು ಹೇಳಿ, ಈ ಬಾರಿ ಕಾಂಗ್ರೆಸ್ ಹೊರತುಪಡಿಸಿ ಉಳಿದ ಎಲ್ಲ ಪಕ್ಷಗಳ ಒಕ್ಕೂಟದ ಪ್ರಗತಿರಂಗ ಸ್ಥಾಪಿಸಿ ಕಾಂಗ್ರೆಸ್ಅನ್ನು ಅಧಿಕಾರದಿಂದ ಹೊರಗೆ ಇಡಲಾಗುವುದು ಎಂದು ಹೇಳಿದರು.