ಜಾತಿ ರಾಜಕಾರಣದ ಆರೋಪ ಸತ್ಯಕ್ಕೆ ದೂರ: ಶಾಸಕ
ಮಸ್ಕಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ತಮಗೆ ಮತ ನೀಡದಿದ್ದರೂ ಗೆಲ್ಲುವುದಾಗಿ ತಮ್ಮ ವಿರೋಧಿಗಳು ತಮ್ಮ ಬಗ್ಗೆ ಅಪಪ್ರಚಾರಕ್ಕೆ ತೊಡಗಿದ್ದಾರೆ ಎಂದು ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು. ತಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಜಾತಿ ರಾಜಕಾರಣದಲ್ಲಿ ತಮಗೆ ನಂಬಿಕೆಯಿಲ್ಲ ಎಂದು ಅವರು ತಿಳಿಸಿದರು.
ಅವರು ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ವಿರೋಧಿಗಳು ಅಪಪ್ರಚಾರ ಮಾಡುವ ಮೂಲಕ ಜಾತಿ ಕುರಿತು ಅನಗತ್ಯ ಗೊಂದಲ ಎಬ್ಬಿಸುತ್ತಿದ್ದಾರೆ. ಅದರ ಬಗ್ಗೆ ಕ್ಷೇತ್ರದ ಮತದಾರರು ಕಿವಿಗೊಡದಿರುವಂತೆ ಮನವಿ ಮಾಡಿದರು. ತಾವು ಎಲ್ಲ ಜಾತಿ ಜನಾಂಗದವರನ್ನು ಸಮಾನತೆಯಿಂದ ಕಂಡಿದ್ದು, ರಾಜಕಿಯ ಲಾಭಕ್ಕಾಗಿ ಎಂದೂ ಜಾತಿ ರಾಜಕಾರಣ ಮಾಡಿಲ್ಲ. ತಮ್ಮ ಜನಪ್ರಿಯತೆ ಸಹಿಸದ ಕೆಲವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಕೀಳುಮಟ್ಟದ ಪ್ರಚಾರ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಗ್ರಾಪಂ ಸದಸ್ಯ ಶಿವಕುಮಾರ, ಮಲ್ಲಯ್ಯ ಬಳ್ಳಾ ಮತ್ತಿತರರು ಇದ್ದರು.