ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪತ್ರಿಕೆ ರಾಜಕೀಯ ಪಕ್ಷಗಳ ಮುಖವಾಣಿಯಾಗದಿರಲಿ

Lingaraj Badiger
Updated On : 7 Mar 2013, 11:18 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಮಾ.6
ಪತ್ರಿಕೆಗಳು ವೈಯಕ್ತಿಕ ಅಭಿಪ್ರಾಯಗಳನ್ನು ಬಿಟ್ಟು ಸಾಮೂಹಿಕ ವಿಚಾರಗಳನ್ನು ಪ್ರಚುರಪಡಿಸಬೇಕು. ಒಂದು ವೇಳೆ ಅವು ಎಡವಿದರೆ ಜನರ ಮನಸ್ಸಿನಲ್ಲಿ ಪತ್ರಿಕೆಗಳು ಕಳೆದು ಹೋಗಬಹುದು. ಪತ್ರಿಕೆಗಳು ರಾಜಕೀಯ ಪಕ್ಷಗಳ ಮುಖವಾಣಿಯಾಗಬಾರದೆಂದು ವಿಶ್ರಾಂತ ಪ್ರಾಂಶುಪಾಲ, ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ ಸಲಹೆ ನೀಡಿದರು.
ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ದುನಿಯಾ ರಾಯಚೂರು ಪಾಕ್ಷಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ,ಪತ್ರಿಕೆಗಳು ಸುದ್ದಿ ನೀಡುವ ಅವಸರದಲ್ಲಿ ರೋಚಕ, ಅತಿರಂಜಿತ ಸುದ್ದಿಗಳನ್ನು ನೀಡುವ ಬದಲಾಗಿ ಸಮಾಜದ ಓರೆ- ಕೋರೆಗಳನ್ನು ತಿದ್ದುವ, ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಅಂದಾಗ ಮಾತ್ರ ಪತ್ರಿಕೆ ಜನಮಾನಸದಲ್ಲಿ ಉಳಿಯಲು ಸಾಧ್ಯ ಎಂದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ದೇಶದ ಸಂವಿಧಾನದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ತಪ್ಪು ಹೆಜ್ಜೆ ಇಟ್ಟಾಗ ಪತ್ರಿಕೆಗಳು ಪ್ರಜಾಪ್ರಭುತ್ವದ ರಕ್ಷಕನಂತೆ ಕೆಲಸ ಮಾಡುತ್ತವೆ ಎಂದು ಹೇಳಿದರು.
ಪತ್ರಿಕೆ ಜನರ ಮನದಲ್ಲುಳಿಯಲಿ: ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕನಕ ಗುರುಪೀಠದ ಗೌರವಾಧ್ಯಕ್ಷ ನಂಜುಂಡಯ್ಯ ಗುರುವಿನ್ ಆಶೀರ್ವಚನ ನೀಡಿ, ಮುಂದಿನ ದಿನಗಳಲ್ಲಿ ಪತ್ರಿಕೆ ಉತ್ತರೋತ್ತರವಾಗಿ ಬೆಳೆದು ಜನರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ್ ಗುಡಿ ಮಾತನಾಡಿದರು. ಸಿಂಧೂರಬಿಂಬ ಕನ್ನಡ ದಿನಪತ್ರಿಕೆಯ ಸಂಪಾದಕ ಎಂ. ವೀರಭದ್ರಪ್ಪ ಜವಳಗೇರಾ ಪತ್ರಿಕೆಗೆ ಶುಭ ಹಾರೈಸಿ ಮಾತನಾಡಿದರು. ಪತ್ರಿಕೆಯ ಸಂಪಾದಕ ಕೆ.ನಾಗರಾಜ ಇದ್ದರು.
ಈ ಸಂದರ್ಭದಲ್ಲಿ ಬಾಲಸ್ವಾಮಿ ವಕೀಲರು, ಮುಖಂಡ ಚಿಟ್ಟಿಬಾಬು, ಸಿಂಧೂರವಾಣಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಹನುಮೇಶ, ಮುಖಂಡ ಕೊಟ್ರಪ್ಪ, ನಾಗಪ್ಪ ಗೋಮರ್ಸಿ, ಶರಣೇಗೌಡ ಗಿಣಿವಾರ, ಬಸವರಾಜ ಮುದ್ದಾಪುರ, ವೆಂಕೋಬ ಮುರಾರಿ, ತಿಮ್ಮಣ್ಣ ಅಲಬನೂರು, ಅರಳಪ್ಪ ಗೀತಾಕ್ಯಾಂಪ್, ಅಲ್ಲಮಪ್ರಭು ಪೂಜಾರಿ, ನಾರಾಯಣ ಬೆಳಗುರ್ಕಿ, ಮಂಜುನಾಥ ಕಣ್ಣೂರು ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಂಕರ ಗುರಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರ್ಥನೆಯನ್ನು ಆನಂದ ಹೆಗ್ಡೆ ಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣ ಮಲಕಸಮುದ್ರ ನಡೆಸಿಕೊಟ್ಟರೆ, ಸಿಆರ್‌ಪಿ ವೀರೇಶ ಗೋನವಾರ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಹುಡಸಪ್ಪ ಹುಡಸೂರು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement