ಮಠ ಹಸ್ತಾಂತರಕ್ಕೆ ಕೇಂದ್ರದ ಖಂಡನೆ
ಸಿಂಧನೂರು: ಬಿಡದಿಯ ನಿತ್ಯಾನಂದ ಧ್ಯಾನಪೀಠಕ್ಕೆ ಮುಧೋಳದ ಮಹಾಲಿಂಗೇಶ್ವರ ಮಠವನ್ನು ವರ್ಗಾವಣೆ ಮಾಡುವ ಸಂಗತಿ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದು, ಬಸವ ಪರಂಪರೆಯನ್ನು ಹೊಂದಿರುವ ಮಠವನ್ನು ಯಾವುದೇ ಕಾರಣಕ್ಕೂ ನಿತ್ಯಾನಂದನಿಗೆ ಬಿಟ್ಟುಕೊಡಬಾರದು ಎಂದು ಬಸವ ಕೇಂದ್ರ ಆಗ್ರಹಿಸಿದೆ.
ನಗರದ ಬಸವಪ್ರಸಾದ ನಿಲಯದಲ್ಲಿ ನಡೆದ ಬಸವಾಭಿಮಾನಿಗಳ ಸಭೆಯಲ್ಲಿ ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ ಮಾತನಾಡಿ, ಚಿತ್ರದುರ್ಗದ ಮುರುಘಾಮಠದ ಶಾಖಾಮಠವಾಗಿರುವ ಮಹಾಲಿಂಗೇಶ್ವರ ಮಠದ ಉತ್ತರಾಧಿಕಾರಿಯಾಗಲು ಬಸವ ಪರಂಪರೆಯ ಜ್ಞಾನವನ್ನು ಹೊಂದಿದ್ದು ಅದನ್ನು ಉಳಿಸಿ ಬೆಳೆಸಲು ಆಸಕ್ತನಾಗಿರಬೇಕು. ಅಲ್ಲದೇ ಬಸವ ತತ್ವಗಳನ್ನು ಸ್ವತಃ ಪಾಲಿಸಬೇಕು. ಆದರೆ ವಿವಾದಿತ ಕಾಮಿ ನಿತ್ಯಾನಂದನಿಗೆ ಮಠವನ್ನು ಹಸ್ತಾಂತರಿಸುವ ಬಗ್ಗೆ ಚರ್ಚೆನಡೆದಿರುವುದು ಖಂಡನೀಯ. ಕಾರಣ ಮಠದ ಹಸ್ತಾಂತರ ವಿಚಾರ ಕೈಬಿಡಬೇಕು ಎಂದು ಒತ್ತಾಹಿಸಿದರು.
ಬಸವಕೇಂದ್ರದ ಗೌರವಾಧ್ಯಕ್ಷ ಪಿ.ವೀರಭದ್ರಪ್ಪ, ವೀರಭದ್ರಗೌಡ ಅಮರಾಪುರ, ಪಂಪಣ್ಣ ಎಚ್, ನಾಗಭೂಷಣ ನವಲಿ, ವೀರೇಶಪ್ಪ ಸಿರಗುಂಪಿ, ಕರೇಗೌಡ ಪೊಲೀಸ್ ಪಾಟೀಲ್, ಶ್ರೀಶೈಲ ಪತ್ತಾರ, ಅಮರೇಶ ಗುರಿಕಾರ, ನಿಜಗುಣ ಹಡಪದ, ಎಚ್.ಜಿ. ಹಂಪಣ್ಣ, ಗೋವಿಂದರಾಜ ಬಾರಕೇರ, ಹಲಗಪ್ಪ ಮೇದಾರ, ಶೇಖರ ಯರದಿಹಾಳ ಮತ್ತಿತರರು ಉಪಸ್ಥಿತರಿದ್ದರು.
ವ್ಯಕ್ತಿ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ 2ರಲ್ಲಿ ಹೊಟ್ಟೆ ನೋವು ತಾಳದೇ ವ್ಯಕ್ತಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಗೋವಿಂದ ಬೈರಾಗಿ ಎಂದು ಗುರ್ತಿಸಲಾಗಿದೆ. ಈತ ಹಲವು ತಿಂಗಳುಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಅದರಿಂದ ಬೇಸತ್ತು ಈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.