ಲಿಂಗಸ್ಗೂರು- 119, ಮುದಗಲ್- 70 ಸಿಬ್ಬಂದಿ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮಾ.6
ಸ್ಥಳೀಯ ಸಂಸ್ಥೆ ಚುನಾವಣೆ ಮಾ.7ರಂದು ನಡೆಯಲಿದ್ದು, ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲು ಲಿಂಗಸ್ಗೂರು ಪುರಸಭೆಗೆ 119 ಹಾಗೂ ಮುದಗಲ್ ಪಟ್ಟಣ ಪಂಚಾಯ್ತಿಗೆ 70 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ಟಿ. ಯೋಗೇಶ್ ತಿಳಿಸಿದರು.
ಲಿಂಗಸ್ಗೂರು ಪುರಸಭೆ ವ್ಯಾಪ್ತಿಯ ಒಟ್ಟು 23 ವಾರ್ಡುಗಳ ಪೈಕಿ ಈಗಾಗಲೇ ಪಿ.ಎಸ್- 20ನೇ ವಾರ್ಡಿನ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಸುಗಮ ಮತದಾನಕ್ಕೆ 26 ಮತಗಟ್ಟೆ ಕೇಂದ್ರಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಲ್ಲಿ 13 ಸೂಕ್ಷ್ಮ ಮತ್ತು 14 ಅತಿ ಸೂಕ್ಷ್ಮ ಮತಕೇಂದ್ರಗಳೆಂದು ಗುರುತಿಸಲಾಗಿದೆ. ಪುರಸಭೆ ಚುನಾವಣೆಯಲ್ಲಿ 13,374 ಪುರುಷರು ಹಾಗೂ 13,069 ಮಹಿಳೆಯರು ಸೇರಿದಂತೆ ಒಟ್ಟು 26,443 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಲಿಂಗಸ್ಗೂರು ಪುರಸಭೆ ಚುನಾವಣೆ ಕರ್ತವ್ಯ ನಿರ್ವಹಣೆಗೆ ಪಿಆರ್‌ಒ 26, ಎಪಿಆರ್‌ಒ 26, 2ಪಿಒ 26, 3ಪಿಒ 26, ಡಿ3 ಗ್ರೇಡ್ 26 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆ ಜರುಗದಂತೆ ಸೂಕ್ತ ಭದ್ರತೆ ಒದಗಿಸಲು 88 ಪೊಲೀಸರು, 25 ಹೋಂ ಗಾರ್ಡ್, ಒಬ್ಬ ನೋಡಲ್ ಅಧಿಕಾರಿ, ಒಬ್ಬ ವೀಕ್ಷಕರು ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಅದರಂತೆ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಒಟ್ಟು 19 ವಾರ್ಡುಗಳ ಪೈಕಿ ಸುಗಮ ಮತದಾನಕ್ಕೆ 23 ಮತಗಟ್ಟೆ ಕೇಂದ್ರಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಲ್ಲಿ 13 ಸೂಕ್ಷ್ಮ ಮತ್ತು 10 ಅತಿ ಸೂಕ್ಷ್ಮ ಮತಕೇಂದ್ರಗಳೆಂದು ಗುರುತಿಸಲಾಗಿದೆ. ಚುನಾವಣೆಯಲ್ಲಿ 9, 596 ಪುರುಷರು ಹಾಗೂ 9, 239 ಮಹಿಳೆಯರು ಸೇರಿದಂತೆ ಒಟ್ಟು 18, 835 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಪಟ್ಟಣ ಪಂಚಾಯ್ತಿ ಚುನಾವಣೆ ಕರ್ತವ್ಯ ನಿರ್ವಹಣೆಗೆ ಪಿಆರ್‌ಒ 23, ಎಪಿಆರ್‌ಒ 23, 2ಪಿಒ 23, 3ಪಿಒ 23, ಡಿ3 ಗ್ರೇಡ್ 23 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸೂಕ್ತ ಭದ್ರತೆ ಒದಗಿಸಲು 76 ಪೊಲೀಸರು, 20 ಹೋಂ ಗಾರ್ಡ್, ಒಬ್ಬ ನೋಡಲ್ ಅಧಿಕಾರಿ, ಒಬ್ಬ ವೀಕ್ಷಕರು ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.